ಮೈಸೂರು: ದಾಖಲೆಯ 17 ನೇ ಬಜೆಟ್ ಮಂಡನೆ ಬೆನ್ನಲ್ಲೇ ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ನಿನ್ನೆ 17 ನೇ ಬಜೆಟ್ ಮಂಡಿಸಿದ್ದರು. ಈ ಸಾಲಿನ ಬಜೆಟ್ ಮಂಡಿಸಿದ ಬೆನ್ನಲ್ಲೇ ಇಂದು ಮೈಸೂರಿಗೆ ಭೇಟಿ ನೀಡಿದ್ದರು. ಈ ವೇಳೆ ಪತ್ರಕರ್ತರು ಸಿಎಂ ಆಗಿ ಮುಂದುವರಿಯುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಅವರು ಎಲ್ಲವೂ ಹೈಕಮಾಂಡ್ ತೀರ್ಮಾನ ಎಂದಿದ್ದಾರೆ.
ನನಗೆ ಹೈಕಮಾಂಡ್ ಮೇಲೆ ಸಂಪೂರ್ಣ ವಿಶ್ವಾಸವಿದೆ. ಸಿಎಂ ಆಗಿ ಮುಂದುವರಿಯಿರಿ ಎಂದರೆ ಮುಂದುವರಿಯುತ್ತೇನೆ. ಎಲ್ಲವೂ ಹೈಕಮಾಂಡ್ ಗೆ ಬಿಟ್ಟ ವಿಚಾರ. ಯಾರು ಏನು ಹೇಳುತ್ತಾರೆ ಎಂಬುದು ಮುಖ್ಯ ಅಲ್ಲ. ನನಗೆ ಹೈಕಮಾಂಡ್ ತೀರ್ಮಾನವಷ್ಟೇ ಮುಖ್ಯ. ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆ ಎರಡು ಬಜೆಟ್ ಮಂಡಿಸುತ್ತೇನೆ. ರಾಜ್ಯದ ಜನತೆಗೆ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂಬ ಬಯಕೆಯಿದೆ. ಕೊನೆಗೆ ತೀರ್ಮಾನ ಮಾಡುವುದು ಹೈಕಮಾಂಡ್. ಇನ್ನು ಮುಂದೆ ಸಿಎಂ ಬದಲಾವಣೆ ಬಗ್ಗೆ ಯಾರೇ ಪ್ರಶ್ನೆ ಮಾಡಿದರೂ ನನ್ನದು ಇದೇ ಉತ್ತರ ಎಂದಿದ್ದಾರೆ.
ಬಜೆಟ್ ಮಂಡನೆ ಬೆನ್ನಲ್ಲೇ ಈಗ ಸಿಎಂ ಬದಲಾವಣೆ ವಿಚಾರ ಮತ್ತೆ ಗರಿಗೆದರುವ ಸೂಚನೆಯಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಈ ಮಹತ್ವದ ಹೇಳಿಕೆ ನೀಡಿದ್ದಾರೆ.