ಮುಡಾ ಸಂಕಷ್ಟದ ಬೆನ್ನಲ್ಲೇ ಚಾಮುಂಡಿ ತಾಯಿಯ ಮೊರೆ ಹೋಗಲಿರುವ ಸಿದ್ದರಾಮಯ್ಯ

Krishnaveni K

ಸೋಮವಾರ, 2 ಸೆಪ್ಟಂಬರ್ 2024 (13:33 IST)
ಬೆಂಗಳೂರು: ಮುಡಾ ಹಗರಣದಲ್ಲಿ ಸಂಕಷ್ಟಕ್ಕೀಡಾಗಿರುವ ಬೆನ್ನಲ್ಲೇ ಇಂದು ಸಂಜೆ ಸಿಎಂ ಸಿದ್ದರಾಮಯ್ಯ ತವರು ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದು, ಚಾಮುಂಡಿ ತಾಯಿಯ ಪೂಜೆ ಮಾಡಲಿದ್ದಾರೆ.

ಎಲ್ಲಾ ನಿಗದಿಯಂತೆ ನಡೆದಿದ್ದರೆ ಇಂದೇ ಸಿದ್ದರಾಮಯ್ಯ ಚಾಮುಂಡಿ ತಾಯಿಯ ದರ್ಶನ ಪಡೆಯಬೇಕಿತ್ತು. ಆದರೆ ಇಂದು ಮಧ್ಯಾಹ್ನ ಕೋರ್ಟ್ ನಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯುತ್ತಿದೆ.

ಈ ಹಿನ್ನಲೆಯಲ್ಲಿ ಸಿಎಂ ಇಂದು ಬೆಳಿಗ್ಗೆ ಮೈಸೂರಿಗೆ ಪ್ರಯಾಣ ಮಾಡುವುದನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಿದ್ದಾರೆ. ಸಂಜೆ ವೇಳೆಗೆ ವಿಶೇಷ ವಿಮಾನದಲ್ಲಿ ಮೈಸೂರಿಗೆ ಪ್ರಯಾಣಿಸಿ ನಾಳೆ ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆಗೆ ಸಂಕಷ್ಟದಿಂದ ಪಾರು ಮಾಡುವಂತೆ ಪೂಜೆ ಮಾಡಲಿದ್ದಾರೆ.

ಮುಡಾ ಹಗರಣ ವಿಚಾರವಾಗಿ ಕೋರ್ಟ್ ಇಂದೇ ತೀರ್ಪು ನೀಡುವ ಸಾಧ್ಯತೆ ಕಡಿಮೆ. ಆದರೆ ವಿಚಾರಣೆ ಇಂದಿಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಕೇಸ್ ಕೇವಲ ಸಿದ್ದರಾಮಯ್ಯನವರಿಗೆ ಮಾತ್ರವಲ್ಲ, ಕಾಂಗ್ರೆಸ್ ಪಕ್ಷಕ್ಕೇ ಮಹತ್ವದ್ದಾಗಿದೆ. ಈ ಪ್ರಕರಣದಲ್ಲಿ ರಾಜ್ಯಪಾಲರ ಕ್ರಮ ಸರಿ ಎಂದು ಹೈಕೋರ್ಟ್ ತೀರ್ಪು ನೀಡಿದರೆ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ