ಬೆಂಗಳೂರು: ತಮ್ಮ ಮೇಲೆ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರ್ಟೂನ್ ಒಂದರ ಮೂಲಕ ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟಿದ್ದಾರೆ.
ಮುಡಾ ಸೈಟು ಹಗರಣವನ್ನು ಪ್ರತಿಪಕ್ಷಗಳು ವಿನಾಕಾರಣ ಎಳೆದು ತರುತ್ತಿವೆ ಎನ್ನುತ್ತಿದ್ದ ಸಿದ್ದರಾಮಯ್ಯ ಈಗ ರಾಜ್ಯಪಾಲರು ತನಿಖೆಗೆ ಅನುಮತಿಸಿರುವುದು ನುಂಗಲಾರದ ತುತ್ತಾಗಿದೆ. ಈ ಬಗ್ಗೆ ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು ಕೇಂದ್ರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಲೇ ಇದ್ದಾರೆ.
ಇದೀಗ ರಾಜ್ಯಪಾಲರು, ಮೋದಿ ಮತ್ತು ಎಚ್ ಡಿ ಕುಮಾರಸ್ವಾಮಿ ಅವರನ್ನೊಳಗೊಂಡ ವ್ಯಂಗ್ಯ ಚಿತ್ರ ಪ್ರಕಟಿಸಿ ಗೊಂಬೆ ಆಡ್ಸೋನು ಮೇಲೆ ಕುಂತವ್ನು ಎಂದು ಟಾಂಗ್ ಕೊಟ್ಟಿದ್ದಾರೆ. ಈ ವ್ಯಂಗ್ಯ ಚಿತ್ರದಲ್ಲಿ ಮೋದಿ ರಾಜ್ಯಪಾಲರ ತಲೆಮೇಲೆ ಕೂತು ಗೊಂಬೆ ಆಡಿಸುವವರಂತೆ ಚಿತ್ರಿಸಲಾಗಿದೆ. ಇನ್ನೊಂದೆಡೆ ಕುಮಾರಸ್ವಾಮಿಯವರು ಹಗರಣಗಳ ಫೈಲ್ ಗಳ ಮೇಲೆ ನಿಂತಿರುವಂತೆ ಬಿಂಬಿಸಲಾಗಿದೆ.
ಈ ವ್ಯಂಗ್ಯ ಚಿತ್ರದ ಮೂಲಕ ತಮ್ಮ ಮೇಲಿನ ಪ್ರಕರಣ ಮೋದಿಯವರದ್ದೇ ಪಿತೂರಿ ಎಂದು ಆರೋಪ ಮಾಡಿದ್ದಾರೆ. ಇಂದು ಕೊಪ್ಪಳದಲ್ಲಿ ಮಾತನಾಡಿದ ಅವರು ಅಗತ್ಯ ಬಿದ್ದರೆ ಕುಮಾರಸ್ವಾಮಿಯನ್ನು ಬಂಧಿಸಲೂ ಹಿಂದೆ ಮುಂದೆ ನೋಡಲ್ಲ ಎಂದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಕುಮಾರಸ್ವಾಮಿ ಇಂತಹ 100 ಸಿದ್ದರಾಮಯ್ಯ ಬಂದರೂ ನನ್ನ ಬಂಧಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದರು.