ಕರ್ನಾಟಕ ರಾಜ್ಯದ 19ನೇ ನೂತನ ರಾಜ್ಯಪಾಲರಾಗಿ ಥಾವರಚಂದ್ ಗೆಹಲೋತ್ ನೇಮಕವಾಗಿದ್ದಾರೆ. ಹಾಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದ ಥಾವರಚಂದ್ ಗೆಹಲೋತ್ ಇಂದು ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಜಭವನದ ಗಾಜಿ ಮನೆಯಲ್ಲಿ ನಡೆದ ಸರಳದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಹೈಕೋರ್ಟ್ ಸಿಜೆ ಎ.ಎಸ್.ಒಕಾ ಪ್ರತಿಜ್ಞಾವಿಧಿ ಬೋಧಿಸಿದರು. ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ನೂತನ ರಾಜ್ಯಪಾಲ ಥಾವರಚಂದ್ ಗೆಹಲೋತ್, ನಾನು ಶ್ರದ್ಧಾಪೂರ್ವಕವಾಗಿ ಕರ್ನಾಟಕ ರಾಜ್ಯಪಾಲ ಹುದ್ದೆಯ ಜವಾಬ್ದಾರಿಗಳನ್ನು ನಿಭಾಯಿಸುತ್ತೇನೆಂದು ಭರವಸೆ ನೀಡಿದರು. ಜೊತೆಗೆ ವಿಧಿಬದ್ಧ ನಿಯಮಗಳ ಪಾಲನೆ ಮೂಲಕ ಸಂವಿಧಾನದ ರಕ್ಷಣೆ ಮಾಡಲು ಬದ್ಧನಾಗಿರುತ್ತೇನೆ. ಕರ್ನಾಟಕ ರಾಜ್ಯದ ಜನರ ಸೇವೆ ಮತ್ತು ಕಲ್ಯಾಣ ಕಾರ್ಯಗಳಲ್ಲಿ ನಿರತನಾಗಿರುತ್ತೇನೆ ಎಂದು ಹೇಳಿದರು. ಇದಾದ ಬಳಿಕ ನಿರ್ಗಮಿತ ರಾಜ್ಯಪಾಲ ವಿ.ಆರ್.ವಾಲಾ ಗೆಹಲೋತ್ಗೆ ಅಧಿಕಾರ ಹಸ್ತಾಂತರ ಮಾಡಿ, ನೂತನ ರಾಜ್ಯಪಾಲರಿಗೆ ಶುಭಕೋರಿದರು. ಅಲ್ಲದೆ ಸಿಎಂ ಬಿ.ಎಸ್ ವೈ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಉಳಿದೆಲ್ಲ ಸಚಿವರು, ರಾಜಕೀಯ ನಾಯಕರು ನೂತನ ರಾಜ್ಯಪಾಲರಿಗೆ ಶುಭಕೋರಿದರು.