ಒಂಟಿ ಮಹಿಳೆಯರ ವಿಶ್ವಾಸ ಗಿಟ್ಟಿಸಿಕೊಂಡು ಅಸಲಿ ಚಿನ್ನ ಎಂದು ನಂಬಿಸಿ ನಕಲಿ ಚಿನ್ನ ಮಾರಾಟ

ಶುಕ್ರವಾರ, 24 ಸೆಪ್ಟಂಬರ್ 2021 (21:57 IST)
ಬೆಂಗಳೂರು: ತುಪ್ಪ ಮಾರಾಟ ಮಾಡುವ ಸೋಗಿನಲ್ಲಿ ಒಂಟಿ ಮಹಿಳೆಯರ ವಿಶ್ವಾಸ ಗಿಟ್ಟಿಸಿಕೊಂಡು ಅಸಲಿ ಚಿನ್ನ ಎಂದು ನಂಬಿಸಿ ನಕಲಿ ಚಿನ್ನ ಮಾರಾಟ ಮಾಡುತ್ತಿದ್ದ ಇಬ್ಬರು ಗುಜರಾತಿ ಮಹಿಳೆಯರನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ಅಹಮದಾಬಾದ್ ಇಂಡಿ ಗ್ರಾಮದ ಗೌರಿ ಕಿಶೋರ್ ಹಾಗೂ ನಿರುದಾ ಬಂಧಿತ ಆರೋಪಿಗಳು.
ಇವರು ಗುಜರಾತ್​​ ಮೂಲದವರಾಗಿದ್ದು, ಸುಲಭವಾಗಿ ಹಣ ಸಂಪಾದನೆ ಮಾಡಬೇಕೆಂದು ಬೆಂಗಳೂರಿಗೆ ಬಂದಿದ್ದರು. ಇವರು ಗುಜರಾತಿಗಳು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳನ್ನೇ ಕೃತ್ಯಕ್ಕೆ ಗುರಿಯಾಗಿಸಿಕೊಳ್ಳುತ್ತಿದ್ದರು.
ತುಪ್ಪ ಮಾರಾಟ‌ ಮಾಡುವ ಸೋಗಿನಲ್ಲಿ ಬೀದಿ ಬೀದಿ ಅಲೆಯುತ್ತಿರುವ ಇವರು, ಸೆ.20 ರಂದು ಗುಜರಾತಿ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡಿದ್ದರು. ಈ ಪರಿಚಯ ಸಲುಗೆಯಾಗಿ ಬೆಳೆದು ವಂಚಕಿಯರನ್ನು ಮಹಿಳೆ ಮನೆಗೆ ಬರಮಾಡಿಕೊಂಡಿದ್ದಾರೆ. ಜಮೀನಿನಲ್ಲಿ ಚಿನ್ನದ ನ್ಯಾಣಗಳು ದೊರೆತಿವೆ.‌ ಕಡಿಮೆ‌ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿ ವಂಚಕಿಯರು ಅಸಲಿ ಚಿನ್ನದ ನಾಣ್ಯಗಳನ್ನು ತೋರಿಸಿದ್ದಾರೆ. ಇದನ್ನು ಪರೀಕ್ಷಿಸಿದಾಗ ಅಸಲಿ ಚಿನ್ನ ಎಂದು ದೃಢಪಡಿಸಿಕೊಂಡ ಮಹಿಳೆ, ಆರೋಪಿಗಳೊಂದಿಗೆ ವ್ಯವಹಾರ‌ ಮಾಡಲು ಮುಂದಾಗಿದ್ದರು. ಮರುದಿನ ವಂಚಕಿಯರು 100 ಗ್ರಾಂ ತೂಕದ ನಕಲಿ ಚಿನ್ನದ ನಾಣ್ಯವನ್ನು ಮಹಿಳೆಗೆ ನೀಡಿ ಆಕೆಯಿಂದ 90 ಸಾವಿರ ಹಣ ಪಡೆದು ಪರಾರಿಯಾಗಿದ್ದರು.
ಇತ್ತ ಮಹಿಳೆ ಗಿರವಿ ಅಂಗಡಿಯಲ್ಲಿ ಪರೀಕ್ಷಿಸಿದಾಗ ನಕಲಿ ಚಿನ್ನ ಎಂದು ತಿಳಿದು ಬಂದಿತ್ತು. ಕೂಡಲೇ ಮಹಿಳೆ ಮಾಗಡಿ‌ ರಸ್ತೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಘಟನೆಯ ಕುರಿತು ಕಾರ್ಯಾಚರಣೆ ನಡೆಸಿದ ಪೊಲಿಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 6 ಗ್ರಾಂ ತೂಕದ ಮೂರು ಅಸಲಿ ಚಿನ್ನದ ನಾಣ್ಯಗಳು, 27 ನಕಲಿ ಚಿನ್ನದ ನಾಣ್ಯ ಹಾಗೂ 90 ಸಾವಿರ ನಗದು ಜಪ್ತಿ ಮಾಡಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ