ಗೌರಿ ಲಂಕೇಶ್ ಪತ್ರಿಕೆಯ 3 ವರ್ಷದ ಸಂಚಿಕೆ ಪರಿಶೀಲಿಸುತ್ತಿರುವ ಎಸ್`ಐಟಿ.. ಯಾಕೆ ಗೊತ್ತಾ..?
ಸೋಮವಾರ, 11 ಸೆಪ್ಟಂಬರ್ 2017 (17:41 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಎಲ್ಲ ಆಂಗಲ್`ಗಳಲ್ಲೂ ಪರಿಶೀಲನೆ ನಡೆಸುತ್ತಿದೆ. ಇದೀಗ, ವೈಯಕ್ತಿಕ ದ್ವೇಷದ ಮೇಲೆ ಗೌರಿ ಹತ್ಯೆ ನಡೆದಿದೆಯಾ ಎಂಬ ಬಗ್ಗೆ ತನಿಖಾ ತಂಡ ತಲೆಕೆಡಿಸಿಕೊಂಡಿದೆ.
ಹೌದು, ಗೌರಿ ಲಂಕೇಶ್ ಪತ್ರಿಕೆಯ 3 ವರ್ಷದ ಸಂಚಿಕೆಗಳನ್ನ ಪಡೆದಿರುವ ತನಿಖಾ ತಂಡ ಪ್ರಮುಖವಾಗಿ ಯಾರ್ಯಾರ ಮೇಲೆ ಲೇಖನ ಮಾಡಲಾಗಿದೆ. ವರದಿ ಬಳಿಕ ಏನಾದರೂ ಧಮ್ಕಿ ಹಾಕುವ ಯತ್ನ ನಡೆದಿತ್ತೇ..? ಎಂಬ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸುತ್ತಿದೆ. ಪ್ರತೀ ವಾರದ ವರದಿಗಳ ಮೇಲೆ ತನಿಖಾ ತಂಡ ಕಣ್ಣಾಡಿಸುತ್ತಿದೆ. ಇದಕ್ಕಾಗಿ ಎಸ್ಐಟಿ ಒಂದು ಪ್ರತ್ಯೇಕ ತಂಡವನ್ನೇ ರಚಿಸಿದೆ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರುವ ಶಂಕೆ ಹಿನ್ನೆಲೆಯಲ್ಲಿ ಈ ತಂಡ ತನಿಖೆ ನಡೆಸುತ್ತಿದೆ.
ಇತ್ತ, ಸಿಸಿಟಿವಿ ದಾಖಲೆ ವಶಕ್ಕೆ ಪಡೆದಿರುವ ಎಸ್ಐಟಿ ತಂಡ ಬೆಂಗಳೂರಿನ ವಿವಿಧ ಟೋಲ್ ಗೇಟ್`ಗಳ ಡಿವಿಆರ್`ಗಳನ್ನ ವಶಕ್ಕೆ ಪಡೆದಿದೆ. ಟೋಲ್ ಮಾರ್ಗವಾಗಿ ಗೌರಿ ಲಂಕೇಶ್ ಹಂತಕ ನಾಪತ್ತೆಯಾಗಿದ್ದಾನಾ..? ಎಂಬ ಬಗ್ಗೆಯೂ ತನಿಖೆ ಚುರುಕುಗೊಳಿಸಲಾಗಿದೆ. ಈ ಮಧ್ಯೆ, ಎಸ್ಐಟಿಗೆ ಮತ್ತಷ್ಟು ಪೊಲೀಸರ ಸೇರ್ಪಡೆಯಾಗಿದ್ದು, ಇವತ್ತೂ ಸಹ ಗೌರಿ ಲಂಕೇಶ್ ಅವರ ರಾಜರಾಜೇಶ್ವರಿ ನಿವಾಸದ ಬಳಿ ಪರಿಶೀಲನೆ ನಡೆಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ