ಮೈಸೂರು : ನನ್ನ ಬಗ್ಗೆ ವರುಣಾ ಜನರಿಗೆ ಅಪಾರವಾದ ಪ್ರೀತಿಯಿದೆ. ನನ್ನ ಮತ್ತು ವರುಣಾ ಸಂಬಂಧವನ್ನು ಕಿತ್ತುಹಾಕಲು ಯಾರಿಂದಲೂ ಸಾಧ್ಯವಿಲ್ಲ. ಯಾರೇ ಬರಲಿ, ಯಾರೇ ಅಭ್ಯರ್ಥಿಗಳನ್ನು ಬದಲಾಯಿಸಲಿ ಏನೇ ಆದರೂ ನನ್ನ ಗೆಲುವು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಯಾದ ಸೋಮಣ್ಣನಿಗೂ ವರುಣಾ ಕ್ಷೇತ್ರಕ್ಕೂ ಸಂಬಂಧವಿಲ್ಲ. ಬಿಜೆಪಿಯವರು ಅವರನ್ನು ಬಲವಂತವಾಗಿ ಈ ಕ್ಷೇತ್ರದಲ್ಲಿ ನಿಲ್ಲಿಸಿದ್ದಾರೆ. ಅವನು ನಮ್ಮ ಜಿಲ್ಲೆಯವನೂ ಅಲ್ಲ. ಅವನು ರಾಮನಗರ ಜಿಲ್ಲೆಯವನಾಗಿದ್ದು, ಬೆಂಗಳೂರಿನಲ್ಲಿ ರಾಜಕಾರಣ ಮಾಡಿದ್ದಾನೆ. ವರುಣಾ ಕ್ಷೇತ್ರಕ್ಕೆ ಒಬ್ಬ ದುಡ್ಡಿರುವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎನ್ನುವ ಸಲುವಾಗಿ ಸೋಮಣ್ಣನನ್ನು ಇಲ್ಲಿ ನಿಲ್ಲಿಸಿದ್ದಾರೆ ಎಂದು ಟೀಕೆ ಮಾಡಿದರು.
ವರುಣಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡುತ್ತೇವೆ ಎಂಬ ಸಿಎಂ ಭರವಸೆಯ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ 4 ವರ್ಷಗಳ ಆಡಳಿತದಲ್ಲಿ ಯಾಕೆ ಮಾಡಲಿಲ್ಲ? ವರುಣಾ ತಾಲೂಕು ಕೇಂದ್ರ ಎಂಬುದು ಗೊತ್ತಾಗಲಿಲ್ಲ ಎಂದರೆ ಅವರು ರಾಜೀನಾಮೆ ನೀಡಲಿ. ರಾಜ್ಯ ಗೊತ್ತಿಲ್ಲ ಎಂದಮೇಲೆ ಮುಖ್ಯಮಂತ್ರಿ ಯಾಕಾಗಿದ್ದಾರೆ? ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಈಗ ಚುನಾವಣೆ ಬಂದಮೇಲೆ ಗೊತ್ತಾಗಿದೆ ಎಂದರೆ ಅದು ಎಂತಹಾ ಮರೆವಿರಬಹುದು ಎಂದು ಲೇವಡಿ ಮಾಡಿದರು.