ಡಿಕೆಶಿ, ಜಮೀರ್ ಅಹಮ್ಮದ್ ಗೆ ಸದನದಲ್ಲೇ ಸಭಾಪತಿಗಳಿಂದ ಕ್ಲಾಸ್!
ಗುರುವಾರ, 5 ಜುಲೈ 2018 (09:20 IST)
ಬೆಂಗಳೂರು: ರಾಜ್ಯ ವಿಧಾನಸಭೆ ಕಲಾಪ ಆರಂಭವಾಗಿ ಎರಡು ದಿನಗಳ ಕಳೆದರೂ ಶಾಸಕರು, ಸಚಿವರ ಗೈರು ಹಾಜರಾತಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಕೆಂಗಣ್ಣಿಗೆ ಕಾರಣವಾಗಿದೆ.
ತಡವಾಗಿ ಸದನಕ್ಕೆ ಬಂದ ಸಚಿವ ಡಿಕೆ ಶಿವಕುಮಾರ್, ಜಮೀರ್ ಅಹಮ್ಮದ್ ಗೆ ಸ್ಪೀಕರ್ ರಮೇಶ್ ಕುಮಾರ್ ಕ್ಲಾಸ್ ತೆಗೆದುಕೊಂಡ ಘಟನೆ ನಿನ್ನೆಯ ಕಲಾಪದಲ್ಲಿ ನಡೆದಿದೆ.
ಶಾಸಕರು, ಸಚಿವರುಗಳು ಬಹುಪಾಲು ಗೈರು ಹಾಜರಾಗಿರುವುದನ್ನು ನೋಡಿ ಕೆಂಡಾಮಂಡಲರಾದ ಸ್ಪೀಕರ್, 15 ನಿಮಿಷದೊಳಗೆ ಸದನಕ್ಕೆ ಹಾಜರಾಗುವಂತೆ ನೋಡಿಕೊಳ್ಳಲು ಆದೇಶ ನೀಡಿದಾಗ ಸಿಎಂ, ಡಿಸಿಎಂ ತಬ್ಬಿಬ್ಬಾದರು. ಸದನಕ್ಕೆ ಬಾರದೇ ಇದ್ದರೆ ಮೊದಲೇ ಅನುಮತಿ ಪಡೆದಿರಬೇಕು ಎಂದು ಗದರಿದರು.
ಇನ್ನು ಸದನದಲ್ಲಿ ಕಲಾಪ ನಡೆಯುತ್ತಿರುವಾಗಲೇ ಅತ್ತಿತ್ತ ಓಡಾಡುತ್ತಿದ್ದ ಶಾಸಕರನ್ನು ನೋಡಿ ಸಿಟ್ಟಿಗೆದ್ದ ಸ್ಪೀಕರ್, ಇದೇನು ಸಂತೆಯಾ? ನಮ್ಮೂರಿನ ಸಂತೆಯೂ ಹೀಗೇ ಇರುತ್ತದೆ ಎಂದು ವ್ಯಂಗ್ಯವಾಡಿದರು. ಅಷ್ಟೇ ಅಲ್ಲ ಸದನ ಆರಂಭವಾಗಿ ಕೆಲವು ಸಮಯದ ನಂತರ ಆಗಮಿಸಿದ ಡಿಕೆ ಶಿವಕುಮಾರ್ ನೋಡಿ ನೋಡಿ ಪವರ್ ಮಿನಿಸ್ಟ್ರೀ ಬಂದ ತಕ್ಷಣ ಸದನಕ್ಕೆ ಕರೆಂಟ್ ಬಂತು ನೋಡ್ರೀ ಎಂದರು. ಇನ್ನು, ತಡವಾಗಿ ಬಂದ ಮತ್ತೊಬ್ಬ ಸಚಿವ ಜಮೀರ್ ಅಹಮ್ಮದ್ ಬಳಿ ಆಪ್ ಕಹಾಂ ಗಯೇ ಥೇ? ಎಂದು ಹಿಂದಿಯಲ್ಲಿ ಕೇಳಿ ಕಾಲೆಳೆದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.