ಅಕ್ಟೋಬರ್ 22 ರಿಂದ ಕುಷ್ಠರೋಗ ಪತ್ತೆಗೆ ವಿಶೇಷ ಆಂದೋಲನ

ಬುಧವಾರ, 17 ಅಕ್ಟೋಬರ್ 2018 (13:19 IST)
ಜಿಲ್ಲೆಯಾದ್ಯಂತ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕುಷ್ಠರೋಗ ಪತ್ತೆಗೆ ವಿಶೇಷ ಆಂದೋಲನವನ್ನು ಅಕ್ಟೋಬರ್ 22 ರಿಂದ ನವೆಂಬರ್ 4ರವರೆಗೆ ನಡೆಸುವಂತೆ ಜಿಲ್ಲಾಧಿಕಾರಿಯು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರಾಷ್ಟ್ರೀಯ ಕುಷ್ಠರೋಗ ನಿಯಂತ್ರಣಾ ಕಾರ್ಯಕ್ರಮದ  ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಡಿಸಿ ಆರ್. ವೆಂಕಟೇಶಕುಮಾರ ಮಾತನಾಡಿದರು. 
ಈ ವಿಶೇಷ ಆಂದೋಲನದಲ್ಲಿ ಜಿಲ್ಲೆಯ ಒಟ್ಟು 542606 ಮನೆಗಳಿಗೆ ಕುಷ್ಠರೋಗ ಪತ್ತೆ ಹಚ್ಚಲು ತಲಾ ಓರ್ವ ಮಹಿಳಾ ಮತ್ತು ಪುರುಷರನ್ನೊಳಗೊಂಡ 1848 ತಂಡಗಳು ಭೇಟಿ ನೀಡಲಿವೆ. 3422 ತಂಡದಲ್ಲಿ ಸದಸ್ಯರು ಕಾರ್ಯನಿರ್ವಹಿಸಲಿದ್ದು, ಆಂದೋಲನದ ಸಮಗ್ರ ಮೇಲ್ವಿಚಾರಣೆಗೆ 377 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.  ಕುಷ್ಠರೋಗ ಪತ್ತೆ ಗುರುತಿಸುವ ತಂಡವು ನಗರ ಪ್ರದೇಶದಲ್ಲಿ 25 ಮನೆಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ 20 ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದರು.

ಕುಷ್ಠರೋಗ ಪತ್ತೆಗೆ ನಿಯೋಜಿಸಲಾದ ತಂಡದ ಸದಸ್ಯರಿಗೆ   ಆಂದೋಲನ ಉದ್ದೇಶದ ಕುರಿತು ತರಬೇತಿ ನೀಡುವುದು ಹಾಗೂ ಕುಷ್ಠರೋಗದಿಂದ ಬಳಲುತ್ತಿರುವ ರೋಗಿಯನ್ನು ಗುರುತಿಸಿ ಸೂಕ್ತ ಚಿಕಿತ್ಸೆಗೆ  ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಕೇಂದ್ರಗಳಿಗೆ ತೆರಳಿ ಚಿಕಿತ್ಸೆ ಪಡೆಯುವಂತೆ ತಿಳುವಳಿಕೆ ನೀಡಬೇಕು. ಆಂದೋಲನಕ್ಕೆ ಸಿಬ್ಬಂದಿಗಳ ಕೊರತೆಯಾದಲ್ಲಿ ಹೆಚ್ಚುವರಿಯಾಗಿ ಆಶಾ ಕಾರ್ಯಕರ್ತರು, ನರ್ಸಿಂಗ್   ವಿದ್ಯಾರ್ಥಿಗಳು ಹಾಗೂ ಇತರೆ ಕಾಲೇಜಿನ ವಿದ್ಯಾರ್ಥಿಗಳನ್ನು ವಾರದಲ್ಲಿ ಮೂರು ದಿನ ಅವರ ಸೇವೆ ಪಡೆಯಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ