ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ವ್ಯಕ್ತಿಗತ ಹಾಗೂ ಗುಂಪುಗಾರಿಕೆ ಮಾಡ್ತಿದ್ದಾರೆ. ಇದರಿಂದ ಸಂಘಟನೆಗೆ ತೊಡಕಾಗುತ್ತಿದೆ... ಹೀಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮಗೆ ಬಿಜೆಪಿ ಹೈಕಮಾಂಡ್ ನೀಡಿದ್ದ ನೋಟಿಸ್‌ಗೆ ಖಡಕ್ ಆಗಿ ಉತ್ತರಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಗುಂಪುಗಾರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಈಚೆಗೆ ಶಿಸ್ತು ಉಲ್ಲಂಘನೆ ಆರೋಪದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೋಟಿಸ್ ನೀಡಿ, 72 ಗಂಟೆಯಲ್ಲಿ ಉತ್ತರಿಸುವಂತೆ ತಾಕೀತು ಮಾಡಿತ್ತು. ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್‌ಗೆ ಇ-ಮೇಲ್ ಮೂಲಕ ಯತ್ನಾಳ್ ಅವರು 9 ಪುಟಗಳ ಉತ್ತರ ರವಾನೆ ಮಾಡಿದ್ದಾರೆ.
ಕರ್ನಾಟಕದ ಬಿಜೆಪಿಯಲ್ಲಿ ಕುಟುಂಬ ರಾಜಕೀಯ ಮೀತಿ ಮೀರಿದೆ. ಭವಿಷ್ಯ ದೃಷ್ಟಿಯಿಂದ ಇದಕ್ಕೆ ಬ್ರೇಕ್ ಹಾಕಬೇಕು. ಕುಟುಂಬ ರಾಜಕೀಯದಿಂದ ಪಕ್ಷ ವ್ಯಕ್ತಿಗತವಾಗಿ ಗುರುತಿಸಿಕೊಳ್ಳಬಾರದು ಎಂದಿರುವ ಅವರು, ನಾನು ಪಕ್ಷದ ಶಿಸ್ತು ಉಲ್ಲಂಘಿಸಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ಧಾರೆ.
ವಿಜಯೇಂದ್ರ ಅವರು ಹಿರಿಯ ನಾಯಕರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಹೊಂದಾಣಿಕೆ ರಾಜಕೀಯದಿಂದ ಪಕ್ಷ ಸಂಘಟನೆಯಲ್ಲಿ ಬಲಹೀನವಾಗಬಾರದು. ಕಾರ್ಯಕರ್ತರ ಭಾವನೆಗಳನ್ನು ನಾನು ವ್ಯಕ್ತಪಡಿಸುತ್ತಿದ್ದೇನೆ. ನನ್ನ ಹೇಳಿಕೆ ಪಕ್ಷದ ಅನೇಕ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಅಭಿಪ್ರಾಯವಾಗಿದೆ. ಹೀಗಾಗಿ, ಬಿ.ವೈ ವಿಜಯೇಂದ್ರ ಅವರನ್ನು ಕೆಳಗಿಳಿಸಿ, ಸಮರ್ಥ ನಾಯಕರಿಗೆ ಜವಾಬ್ದಾರಿ ನೀಡಬೇಕು ಎಂದು ಉತ್ತರದಲ್ಲಿ ತಿಳಿಸಿದ್ದಾರೆ.