ತಲೆಗೆ ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ
ಶುಕ್ರವಾರ, 17 ಸೆಪ್ಟಂಬರ್ 2021 (09:45 IST)
ಬೆಂಗಳೂರು : ಬೆಂಗಳೂರಿನ ಸಂಜಯನಗರ ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯೋ ಅಥವಾ ಕೊಲೆಯೋ ಶಂಕೆ ವ್ಯಕ್ತವಾಗಿದೆ.
ಮೇಲ್ನೋಟಕ್ಕೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ಕಂಡು ಬಂದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಮೃತ ವಿದ್ಯಾರ್ಥಿ ಜೇಬಿನಲ್ಲಿ ಮೊಬೈಲ್ ಪತ್ತೆಯಾಗಿದ್ದು, ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ವಿದ್ಯಾರ್ಥಿಯನ್ನು ರಾಹುಲ್ ಭಂಡಾರಿ ಎಂದು ಗುರ್ತಿಸಲಾಗಿದೆ. ಈತ ಉತ್ತರಾಖಂಡ್ ಮೂಲದವರಾಗಿದ್ದಾರೆಂದು ತಿಳಿದುಬಂದಿದೆ. ರಾಹುಲ್ ಕುಟುಂಬ ಕಳೆದ 20 ವರ್ಷಗಳಿಂದ ಬೆಂಗಳೂರಿನ ಆರ್.ಟಿ.ನಗರದಲ್ಲಿ ವಾಸವಾಗಿದ್ದು, ಮೃತ ರಾಹುಲ್ ಮಿಲಿಟರಿ ಶಾಲೆಯ ದ್ವಿತೀಯ ಪಿಯು ವಿದ್ಯಾರ್ಥಿಯಾಗಿದ್ದ ಎಂದು ವರದಿಗಳು ತಿಳಿಸಿವೆ.
ರಾಹುಲ್ ಭಂಡಾರಿ ರಾತ್ರಿ ಊಟ ಮುಗಿಸಿ ಮನೆಯಲ್ಲೇ ಮಲಗಿದ್ದ. ತಂದೆ ತಾಯಿ ಮಲಗಿರುವಾಗ ನಾಲ್ಕು ಗಂಟೆಗೆ ಮನೆಯಿಂದ ಎದ್ದು ಹೊರಬಂದಿದ್ದಾನೆ. ರಾಹುಲ್ ಪ್ರತಿದಿನ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಓದಿಕೊಳ್ತಿದ್ದ. ಮಾನಸಿಕ ಒತ್ತಡ ಹೆಚ್ಚಾದಾಗ ಎದ್ದು ವಾಕ್ ಮಾಡ್ತಿದ್ದ. ಅದೇ ರೀತಿ ಇಂದು ಬೆಳಗಿನ ಜಾವ ಕೂಡ ಮನೆಯಿಂದ ಎದ್ದು ಹೊರಬಂದಿದ್ದಾನೆ. ನಾಲ್ಕು ಗಂಟೆಗೆ ಮನೆಯಿಂದ ತೆರಳಿದ್ದಾನೆ. ಬಳಿಕ ಬೆಳಗ್ಗೆ ನಿದ್ದೆಯಿಂದ ಎದ್ದ ಪೋಷಕರು ಮಗ ರೂಮ್ನಲ್ಲಿ ಕಾಣಿಸದ ಹಿನ್ನೆಲೆ ನಿರಂತರವಾಗಿ ಕರೆ ಮಾಡಿದ್ದಾರೆ. ಆದರೆ ರಾಹುಲ್ ಕರೆ ಸ್ವೀಕರಿಸಿಲ್ಲ.
ರಾಹುಲ್ ಮುಂಜಾನೆ ಐದು ಗಂಟೆ ಸುಮಾರಿಗೆ ಶೂಟ್ ಮಾಡಿಕೊಂಡು ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ. ತಲೆಯ ಎಡಭಾಗದಲ್ಲಿ ಶೂಟ್ ಮಾಡಿಕೊಂಡಿದ್ದಾನೆ. ಮೃತ ಪಟ್ಟ ಬಳಿಕವೂ ಪೋಷಕರಿಂದ ನಿರಂತರವಾಗಿ ಕರೆ ಬರ್ತಾನೆ ಇತ್ತು. ಬಳಿಕ ಸ್ಥಳದಲ್ಲಿದ್ದ ಪೊಲೀಸರು ಫೋನ್ ತೆಗೆದು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಸಹೋದರನ ಮೃತದೇಹ ನೋಡಿ ಸಹೋದರಿ ಶಾಕ್ ಆಗಿದ್ದಾರೆ. ನಿನ್ನೆ ಪೂರ್ತಿ ನಾನು ನನ್ನ ತಮ್ಮನ ಜೊತೆ ಮಾತಾಡಿದ್ದೆ. ನನಗೆ ನನ್ನ ಸಹೋದರ ಬೇಕು ಎಂದು ಕಣ್ಣೀರು ಹಾಕುತ್ತಿದ್ದಾರೆ. ಮತ್ತೊಂದು ಕಡೆ ಮಗನ ಈ ಸ್ಥಿತಿ ನೋಡಲಾಗದೇ ತಾಯಿ ಕಣ್ಣೀರು ಸುರಿಸುತ್ತಿದ್ದಾರೆ. ಸದ್ಯ ಆಯಂಬುಲೆನ್ಸ್ ಮೂಲಕ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಮೃತ ಯುವಕನ ಮೃತದೇಹ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.