ಕೊರೋನಾ ನಿಯಂತ್ರಣ: ಆರೋಗ್ಯ ಕಾರ್ಯಕರ್ತರ ಶ್ಲಾಘಿಸಿದ ಸಚಿವ ಡಾ.ಕೆ ಸುಧಾಕರ್
ಬುಧವಾರ, 23 ಫೆಬ್ರವರಿ 2022 (18:38 IST)
ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರು ಜೀವ ಪಣಕ್ಕಿಟ್ಟು ಸೇವೆ ಮಾಡಿದ್ದಾರೆ. ಗಡಿಯಲ್ಲಿ ಹೋರಾಡುವ ಸೈನಿಕನ ಸೇವೆಯೊಂದಿಗೆ ಆರೋಗ್ಯ ಸೇವೆಯು ಮಹತ್ವದ್ದಾಗಿದೆ ಎಂದು ಆರೋಗ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್.
ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಸಿಎಸ್ಆರ್ ಕಾರ್ಯಕ್ರಮದಡಿ ನೀಡಿರುವ 1 ಸಾವಿರ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಘಟಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಖಾಸಗಿ ಕಂಪನಿಗಳು ಸಾಮಾಜಿಕ ಸೇವೆ ಮಾಡುತ್ತಿರುವುದು ಪ್ರಶಂಸನೀಯ. ಆರೋಗ್ಯ, ಶಿಕ್ಷಣ, ನೀರಾವರಿ ಕ್ಷೇತ್ರಗಳಲ್ಲಿ ಖಾಸಗಿ ಕಂಪನಿಗಳು ಭಾಗಿಯಾಗಿ ಒಳ್ಳೆಯ ಕೆಲಸ ಮಾಡುತ್ತಿವೆ. ಕೋವಿಡ್ ಸಮಯದಲ್ಲಿ ಕರ್ನಾಟಕದ ಆರೋಗ್ಯ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದಾರೆ.
ಅವರ ಪ್ರಾಣವನ್ನು ಕೂಡ ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ಆರೋಗ್ಯ ಕಾರ್ಯಕರ್ತರ ಸೇವೆ ದೇಶ ಕಾಯುವ ಸೈನಿಕನ ಸೇವೆಯಷ್ಟೇ ಮಹತ್ವದ್ದಾಗಿದೆ. ಕರ್ನಾಟಕದಲ್ಲಿ ಲಸಿಕೆ ಕಾರ್ಯ ಕೂಡ ಸಾಕಷ್ಟು ವೇಗವಾಗಿ ನಡೆದಿದೆ. 18ಕ್ಕಿಂತ ಮೇಲ್ಪಟ್ಟ ವಯಸ್ಸಿನವರ ವಿಭಾಗದಲ್ಲಿ 100% ರಷ್ಟು ಮೊದಲ ಡೋಸ್ ಹಾಗೂ 90-91% ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗವನ್ನು ಮೆಟ್ಟಿ ನಿಂತಿದ್ದೇವೆ ಎಂದು ಹೇಳಿದರು.
ಸಿಎಸ್ಆರ್ ಯೋಜನೆಯಡಿ ಸರ್ಕಾರಿ ಶಾಲೆಗಳ ಕ್ಲಾಸ್ ರೂಂಗಳನ್ನು ಸ್ಮಾರ್ಟ್ ಕ್ಲಾಸ್ ರೂಂಗಳನ್ನಾಗಿ ಪರಿವರ್ತನೆ ಮಾಡುವ ಯೋಜನೆಗಳು ಜಾರಿಯಾಗುತ್ತಿವೆ. ಈ ಮೂಲಕ 21ನೇ ಶತಮಾನದಲ್ಲಿ ಕಲಿಕೆ ಕೂಡ ಬದಲಾಗುತ್ತಿದೆ. ಸ್ಮಾರ್ಟ್ ಕ್ಲಾಸ್ ರೂಂಗಳಿಂದ ಬಹಳ ಸುಲಭವಾಗಿ ಮಕ್ಕಳಿಗೆ ಪಠ್ಯಗಳು ಅರ್ಥವಾಗಲಿದೆ. ಹೆಸರಾಂತ ಶಿಕ್ಷಕರಿಂದ ಬೋಧನೆ ಆಗಿರುವ ಪಠ್ಯಗಳು ಸ್ಮಾರ್ಟ್ ಕ್ಲಾಸ್ ರೂಂಗಳಲ್ಲಿ ಬೋಧನೆ ಆಗಲಿದೆ. ಈ ಮೂಲಕ ಶಿಕ್ಷಣ ಎಲ್ಲರಿಗೂ ಒಂದೇ ರೀತಿಯ ಗುಣಮಟ್ಟದಲ್ಲಿ ಸಿಗಲಿದೆ ಎಂದು ಹೇಳಿದರು.ಸರ್ಕಾರ ಮತ್ತು ಖಾಸಗಿ ಕಂಪನಿಗಳು ಜೊತೆ ಸೇರಿದಾಗ ಪರಿಣಾಮಕಾರಿ ಅಭಿವೃದ್ಧಿ ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಎಸ್ಆರ್ ಆ್ಯಕ್ಟ್ ನಲ್ಲಿ ಬದಲಾವಣೆಗಳನ್ನು ತಂದ ನಂತರ ಖಾಸಗಿ ಕಂಪನಿಗಳು ಸರ್ಕಾರದ ಜೊತೆ ಕೈ ಜೋಡಿಸುತ್ತಿವೆ. ಇದರಿಂದ ಸಮಾಜಕ್ಕೆ ಉಪಯೋಗವಾಗುತ್ತಿದೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸಾಕಷ್ಟು ಅಭಿವೃದ್ಧಿ ಆಗುತ್ತಿದೆ. ಜಯದೇವ ಸಂಸ್ಥೆಯ ಸಹಯೋಗದೊಂದಿಗೆ 50 ಬೆಡ್ ಗಳ ಕ್ಯಾತ್ ಲ್ಯಾಬ್ ನಿರ್ಮಾಣವಾಗುತ್ತಿದೆ. ಕೆಲವೇ ದಿನಗಳಲ್ಲಿ 50 ಹಾಸಿಗೆ ಸಾಮರ್ಥ್ಯದ ಪೀಡಿಯಾಟ್ರಿಕ್ ಐಸಿಯು ಕೂಡ ಲಭ್ಯವಾಗಲಿದೆ. 200 ಹಾಸಿಗೆಗಳ MCH ಬ್ಲಾಕ್ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿದೆ. 2.6 ಕಿಲೋ ಲೀಟರ್ ಆಕ್ಸಿಜನ್ ಪ್ಲಾಂಟ್ ಸಿದ್ಧವಿದೆ. 8 KL ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಲಭ್ಯವಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ ಸಮಯ ಆರೋಗ್ಯ ಕಾರ್ಯಕರ್ತರಿಗೆ ಸವಾಲಾಗಿತ್ತು. ಆಕ್ಸಿಜನ್ ಗೆ ಬೇಡಿಕೆ ಹೆಚ್ಚಾಗಿತ್ತು. ಅದು ನಮಗೆ ಕಲಿಕೆಗೆ ವೇದಿಕೆಯಾಗಿದೆ. ಆಕ್ಸಿಜನ್ ಮಹತ್ವವನ್ನು ನಾವು ಅರಿತುಕೊಂಡಿದ್ದೇವೆ. ಭಾರತದ ಎಲ್ಲಾ ರಾಜ್ಯಗಳು ಇವತ್ತು ಯಾವ ರೀತಿಯ ಮೆಡಿಕಲ್ ಎಮರ್ಜೆನ್ಸಿಗೆ ಸಿದ್ಧವಾಗಿವೆ. ಯಾವುದೇ ಸಾಂಕ್ರಾಮಿಕ ರೋಗವನ್ನು ತಡೆಯಲು ಮತ್ತು ಅದಕ್ಕೆ ಚಿಕಿತ್ಸೆ ನೀಡಲು ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆರೋಗ್ಯ ವಲಯದ ಬಲವರ್ಧನೆ ಆಗಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಭಾರತ ವಿಶ್ವನಾಯಕನಾಗಿ ಬೆಳೆದಿದೆ ಎಂದು ಹೇಳಿದರು.
ಕೆನಡಾದಂತಹ ಅಭಿವೃದ್ಧಿ ಹೊಂದಿದ ದೇಶದ ಜನರು ಲಸಿಕೆಯ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದ ಜನ ಸರ್ಕಾರದ ಜೊತೆ ನಿಂತು ಸಹಾಯ ಮಾಡಿದ್ದಾರೆ. ಪ್ರಧಾನಿಯವರ ಕರೆಗೆ ಜನರು ಓಗೊಟ್ಟು ಲಸಿಕೆಯಾಗಿದ್ದಾರೆ. 21 ನೇ ಶತಮಾನದಲ್ಲಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಹೊಸ ಯೋಚನೆ, ಯೋಜನೆ ಮತ್ತು ಶ್ರಮದಿಂದ ಹೊಸ ದಾರಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.