ಬೆಂಗಳೂರು: ಈ ಬಾರಿ ಮಂಡ್ಯ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಲು ಕಾರಣವಾದ ಬಿಜೆಪಿ-ಜೆಡಿಎಸ್ ನಾಯಕರ ಮೇಲೆ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಬೆಂಬಲಿಸುವ ಮೂಲಕ ಸೇಡು ತೀರಿಸಿಕೊಳ್ಳುವ ಸಾಧ‍್ಯತೆಯಿದೆ ಎನ್ನಲಾಗಿದೆ.
ಬಹುಶಃ ಸುಮಲತಾ ಪಕ್ಷೇತರರಾಗಿಯೇ ಇದ್ದಿದ್ದರೆ ಅವರಿಗೆ ಈ ಟಿಕೆಟ್ ಬಿಕ್ಕಟ್ಟು ಕಾಡುತ್ತಿರಲಿಲ್ಲ. ಆದರೆ ಬಿಜೆಪಿ ಸೇರಿಕೊಂಡು, ಅತ್ತ ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಸುಮಲತಾಗೆ ಟಿಕೆಟ್ ಕೈ ತಪ್ಪಿ ಹೋಗಿದೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಸುಮಲತಾ ಬಗ್ಗೆ ಇನ್ನಿಲ್ಲದಂತೆ ನಾಲಿಗೆ ಹರಿಬಿಟ್ಟಿದ್ದರು.
ಇದೀಗ ಅದೇ ಜೆಡಿಎಸ್ ಗೆ ಮಂಡ್ಯ ಟಿಕೆಟ್ ಬಿಟ್ಟುಕೊಟ್ಟಿರುವುದು ಸುಮಲತಾ ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿ ಮಟ್ಟದಲ್ಲಿ ಹೋಗಿ ಲಾಬಿ ಮಾಡಿದರೂ ಟಿಕೆಟ್ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಗೆ ಪರೋಕ್ಷವಾಗಿ ಬೆಂಬಲ ಕೊಡುವುದರ ಮೂಲಕ ದಳಪತಿಗಳ ವಿರುದ್ಧ ಸೇಡು ತೀರಿಸಿಕೊಳ್ಳಬಹುದು ಎನ್ನಲಾಗಿದೆ.
ಕಳೆದ ಬಾರಿ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಸಲು ಬಿಜೆಪಿ ಸಹಕಾರ ನೀಡಿತ್ತು. ಕಾಂಗ್ರೆಸ್ ಕೂಡಾ ಪ್ರಬಲ ಅಭ್ಯರ್ಥಿಯನ್ನು ಹಾಕದೇ ಸುಮಲತಾಗೆ ಪರೋಕ್ಷ ಬೆಂಬಲ ಕೊಟ್ಟಿತ್ತು ಎಂಬ ಮಾತುಗಳಿವೆ. ಇಂದು ಅದೇ ರೀತಿ ಸುಮಲತಾ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಕೊಡುವ ಸಾಧ‍್ಯತೆಯಿದೆ.