ನಾನ್ಯಾಕೆ ಕ್ಷಮೆ ಕೇಳಲಿ: ಸುಮಲತಾ ವಿರುದ್ಧ ಎಚ್ ಡಿಕೆ ಕಿಡಿ

ಬುಧವಾರ, 7 ಜುಲೈ 2021 (14:00 IST)
ಸಂಸದೆ ಸುಮಲತಾಗೆ ನಾನೇಕೆ ಕ್ಷಮೆ ಕೇಳಬೇಕು? ನಾನು ಕ್ಷಮೆ ಕೇಳುವಂತಹ ಯಾವುದೇ ಪದ ಬಳಕೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಪದ ಬಳಕೆ ಸಂಸ್ಕೃತಿ ಬಗ್ಗೆ ನನಗೆ ಗೊತ್ತಿದೆ. ಅವರು ಹೇಳಿಕೊಡಬೇಕಾಗಿಲ್ಲ. ಸುಮಲತಾ ಅವರಿಂದ ನಾನು ಸಂಸ್ಕೃತಿ ಪಾಠ ಕಲಿಯಬೇಕಾಗಿಲ್ಲ ಎಂದರು.
ನಾನು ಅಕ್ರಮ ಗಣಿಗಾರಿಕೆ ಮಾಡಲು ಹೇಳಿದ್ದಿನಾ? ನಾನು ಮುಖ್ಯಮಂತ್ರಿ ಇದ್ದಾಗ ಅಕ್ರಮ ಗಣಿಗಾರಿಕೆ ನಿಲ್ಲಬೇಕೆಂದು ಆದೇಶ ಮಾಡಿದ್ದೇನೆ. ಅಕ್ರಮ ಗಣಿಗಾರಿಕೆ ಮಾಡಿದ್ದಾರೆ ಎಂದು ಸಕ್ರಮ ಗಣಿಗಾರಿಕೆ ಮಾಡುವವರ ಬಳಿ ದುಡ್ಡು ವಸೂಲು ಮಾಡುವ ಉದ್ದೇಶದಿಂದ ಮಂಡ್ಯಕ್ಕೆ ಹೋಗಿದ್ದಾರೆ ಎಂದು ಅರೋಪಿಸಿದರು.
ದುಡ್ಡು ಮಾಡುವ ಉದ್ದೇಶದಿಂದ ಅಲ್ಲಿಗೆ ಹೋಗಿದ್ದಾರೆ. ಕೆಆರ್ ಎಸ್ ಬಿರುಕು ಬಿಟ್ಟಿದ್ದರೆ ಅಲ್ಲಿಗೆ ಮಾಧ್ಯಮದವರನ್ನು ಕರೆದುಕೊಂಡು ಹೋಗಿ ತೋರಿಸಬೇಕಾಗಿತ್ತು. ಅದರ ಬದಲಿಗೆ ಗಣಿಗಾರಿಕೆ ತೋರಿಸಲು ಮಾಧ್ಯಮದವರನ್ನು ಹೋಗಿದ್ದಾರೆ. ಸಿನಿಮಾದಲ್ಲಿ ನಡೆಸುವ ರಾಜಕಾರಣವನ್ನು ಇಲ್ಲಿಯೂ ನಡೆಸುತ್ತೆನೆ ಅಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಂದಿನ ರಾಜಕಾರಣವನ್ನು ಮಂಡ್ಯದಲ್ಲಿ ತೋರಿಸುತ್ತೇನೆ. ಮಂಡ್ಯದಲ್ಲಿ ನಮ್ಮನ್ನು ಸೋಲಿಸಿದ್ದಿರಾ ಅಲ್ಲವಾ? ಅಲ್ಲಿಂದಲೇ ಪ್ರಾರಂಭ ಮಾಡುತ್ತೇನೆ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಸಹೋದರ ಅಂಬರೀಶ್ ಮೃತಪಟ್ಟಾಗ ನಾನು ಯಾವ ರೀತಿ ಗೌರವ ಕೊಟ್ಟಿದ್ದೇನೆ ಅಂತ ಜನತೆಗೆ ಗೊತ್ತಿದೆ. ಇವತ್ತು ಮಂಡ್ಯ ಬಗ್ಗೆ ಮಾತನಾಡುತ್ತಾರೆ. ಅವತ್ತು ಅಂಬರೀಶ್ ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದು ಬೇಡ ಅಂದಿದ್ದು ಅವರು, ಅಲ್ಲಿಗೆ ಹೋದ ಮೇಲೆ ಮಣ್ಣನ್ನು ಹಚ್ಚಿಕೊಂಡರು ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ