ಬೆಂಗಳೂರು : ಕೇಂದ್ರ ಸರ್ಕಾರದ ಅನುದಾನದ ಮೂಲಕ ಎಲ್ಲಾ ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಸರ್ವೆ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 287 ಕೋಟಿ ರೂ.ಗಳ ವೆಚ್ಚದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಸರ್ವೆ ಮಾಡಿ ಡಿಜಿಟಲ್ ರೂಪದಲ್ಲಿ ದಾಖಲೆಗಳನ್ನು ಇಡುತ್ತೇವೆ. ಪ್ರಾಯೋಗಿಕವಾಗಿ 4 ಜಿಲ್ಲೆಗಳಲ್ಲಿ ಈ ಕಾರ್ಯ ಸದ್ಯದಲ್ಲೇ ಪ್ರಾರಂಭಿಸುತ್ತೇವೆ ಎಂದು ಮಾಹಿತಿ ನೀಡಿದರು.
ಕಂದಾಯ ಇಲಾಖೆಯ ಕಾರ್ಯಕ್ರಮದ ಕುರಿತು ಮಾತನಾಡಿ, ಇನಾಂತಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರು ಅರ್ಜಿ ಹಾಕಿಕೊಳ್ಳಲು ಇನ್ನೂ ಒಂದು ವರ್ಷ ಅವಕಾಶ ಮಾಡಿಕೊಟ್ಟಿದ್ದೇನೆ. ಆ ಕುರಿತು ಗೆಜೆಟ್ ನೋಟಿಫಿಕೇಷನ್ ಆಗಿದೆ ಎಂದರು.
ಮುಖ್ಯಮಂತ್ರಿ ಮನೆಯ ಮುಂದೆ ಕಾಂಗ್ರೆಸ್ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ಯಾರಿಗೂ ಪ್ರತಿಭಟನೆ ಮಾಡುವುದಕ್ಕೇ ಬಿಡುತ್ತಿರಲಿಲ್ಲ. ನಮ್ಮದು ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡುವ ಸರ್ಕಾರ. ಸಿಎಂ ನಿವಾಸದ ಮುಂದೆ ಪ್ರತಿಭಟನೆ ಮಾಡುವುದಾದರೆ ಸ್ವಾಗತ ಎಂದು ಪ್ರತಿಕ್ರಿಯಿಸಿದರು.