ಸೌದಿ ಅರೇಬಿಯಾ ಪ್ರವಾಸ ಮುಗಿಸಿಕೊಂಡು ಹಿಂದಿರುಗಿದ ಮತ್ತು ವಯೋಸಹಜದಿಂದ ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವುದಕ್ಕೆ ಸರಕಾರ ಸ್ಪಷ್ಟನೆ ನೀಡಿದೆ.
ಕಲಬುರಗಿ ನಗರದ ಮಹ್ಮದ್ ಹುಸೇನ್ ಸಿದ್ದಿಕಿ (ವಯಸ್ಸು 76) ಅವರು ಮಾರ್ಚ್ 10 ರಂದು ನಿಧನರಾಗಿದ್ದು, ಕರೋನಾ ವೈರಸ್‍ನಿಂದ ನಿಧನವಾಗಿದ್ದಾರೆ ಎಂಬುದಕ್ಕೆ ವೈದ್ಯಕೀಯ ವರದಿ ಇನ್ನೂ ದೃಢೀಕರಿಸಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಸ್ಪಷ್ಟನೆ ನೀಡಿದ್ದಾರೆ.
ಮಹ್ಮದ್ ಹುಸೇನ್ ಸಿದ್ದಿಕಿ ಅವರು ಮಾರ್ಚ್ 9 ರಂದು ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರ ಅತಿಯಾಗಿ ಕಾಣಿಸಿದ್ದರಿಂದ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ತದನಂತರ ಅದೇ ದಿನದಂದು ರಾತ್ರಿ ವ್ಯದ್ಯಕೀಯ ಸಲಹೆ ಕಡೆಗಣಿಸಿ ಕುಟುಂಬಸ್ಥರು ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಹೈದ್ರಾಬಾದಿನ “ಕೇರ್ ಹಾಸ್ಪಿಟಲ್” ಎಂಬ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು.
ಅಲ್ಲಿಯೂ ಗುಣಮುಖ ಕಾಣದ ಹಿನ್ನೆಲೆಯಲ್ಲಿ ಕುಟುಂಬಸ್ಥರು ರೋಗಿಯನ್ನು ಹೈದ್ರಾಬಾದಿನ ಅಸ್ಪತ್ರೆಯಿಂದ ಮಾರ್ಚ್ 10 ರಂದು ಮಧ್ಯಾಹ್ನ ಡಿಸ್‍ಚಾರ್ಜ್ ಮಾಡಿಕೊಂಡು ಕಲಬುರಗಿಗೆ ಬರುವ ಮಾರ್ಗಮಧ್ಯದಲ್ಲಿಯೇ ರೋಗಿ ನಿಧನರಾಗಿರುತ್ತಾರೆ ಎಂದು ಡಿ.ಸಿ. ಶರತ್ ಬಿ. ಮಾಹಿತಿ ನೀಡಿದರು.
ಕೆಮ್ಮು, ಜ್ವರದಿಂದ ವ್ಯಕ್ತಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾದ ಕೂಡಲೇ ಇದನ್ನು ಶಂಕಿತ ಕೊರೋನಾ ವೈರಸ್ ಎಂದು ಭಾವಿಸಿಕೊಂಡು ಮಾರ್ಚ್ 9 ರಂದೇ ವ್ಯಕ್ತಿಯ ಗಂಟಲು ದ್ರವ್ಯ ಸ್ಯಾಂಪಲ್ ಪಡೆದು ಬೆಂಗಳೂರಿನ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ವೈರಾಲಾಜಿ ಇಲ್ಲಿಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಇನ್ನೂ ವರದಿ ಬಂದಿಲ್ಲ ಎಂದರು.
ಇನ್ನು ನಿಧನ ಹೊಂದಿದ ವ್ಯಕ್ತಿ ಕುಟುಂಬಸ್ಥರು ಮತು ಸಂಬಂಧಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಇದುವರೆಗೆ ಅವರ ಕುಟುಂಬದ ಸದಸ್ಯರಲ್ಲಿ ಶಂಕಿತ ಕೊರೋನಾ ವೈರಸ್‍ನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದ ಜಿಲ್ಲಾಧಿಕಾರಿಗಳು ತಿಳಿಸಿದರು.