ಪಾಲಿಕೆಯು, 2021-22ನೇ ವಾರ್ಷಿಕ ಸಾಲಿನಲ್ಲಿ 3,500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಇಟ್ಟುಕೊಂಡಿತ್ತು. ಅದರಂತೆ, ಆರ್ಥಿಕ ವರ್ಷದ ಆರಂಭದ ಏಪ್ರಿಲ್ 1 ರಿಂದ ಜುಲೈ 31 ರವರೆಗೆ ಶೆ.75ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದೆ. ಪ್ರಾಾರಂಭದ ನಾಲ್ಕು ತಿಂಗಳಲ್ಲಿ 1,915.18 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 111 ಕೋಟಿ ರೂ. ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದಂತಾಗಿದೆ.
ವಿನಾಯಿತಿ ಸದುಪಯೋಗ:
ಕೊರೊನಾ ಹಿನ್ನಲೆಯಲ್ಲಿ ಪಾಲಿಕೆಯಿಂದ ಆಸ್ತಿ ತೆರಿಗೆ ಪಾವತಿದಾರರಿಗೆ ಎರಡು ತಿಂಗಳ ವಿನಾಯಿತಿ ನೀಡಲಾಗಿತ್ತು. ಈ ವಿನಾಯಿತಿಯನ್ನು ತೆರಿಗೆದಾರರು ಸದುಪಯೋಗಪಡಿಸಿಕೊಂಡಿದ್ದಾಾರೆ. ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಪಾವತಿಸುವ 18 ಲಕ್ಷ ಆಸ್ತಿಗಳನ್ನು ಗುರುತಿಸಲಾಗಿದ್ದು, ಎಂಟು ವಲಯಗಳ ಪೈಕಿ ಮಹದೇವಪುರ ವಲಯದಲ್ಲಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಮತ್ತಷ್ಟು ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಪಾಲಿಕೆ ಮುಂದಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ವಲಯವಾರು ತೆರಿಗೆ ಸಂಗ್ರಹ:
ಪಾಲಿಕೆ ವ್ಯಾಪ್ತಿಯ ಮಹದೇವಪುರ ವಲಯದಲ್ಲಿ 474.77 ಕೋಟಿ ರೂ., ಯಲಹಂಕದಲ್ಲಿ 164.56 ಕೋಟಿ ರೂ., ದಾಸರಹಳ್ಳಿಯಲ್ಲಿ 53.21 ಕೋಟಿ ರೂ., ಆರ್.ಆರ್.ನಗರದಲ್ಲಿ 130.85 ಕೋಟಿ ರೂ., ಬೊಮ್ಮನಹಳ್ಳಿಯಲ್ಲಿ 192.61 ಕೋಟಿ ರೂ., ದಕ್ಷಿಣ ವಲಯದಲ್ಲಿ 309.81 ಕೋಟಿ ರೂ., ಪಶ್ಚಿಮ ವಲಯದಲ್ಲಿ 206.75 ಕೋಟಿ ರೂ. ಮತ್ತು ಪೂರ್ವ ವಲಯದಲ್ಲಿ 372.62 ಕೋಟಿ ರೂ. ಆಸ್ತಿ ತೆರಿಗೆ ಪಾವತಿಸಿದ್ದಾರೆ ಎಂದು ಹೇಳಿದ್ದಾರೆ.