ಹಿಜಬ್ ಕೇಸರಿ ಶಾಲು ವಿವಾದ

ಗುರುವಾರ, 27 ಜನವರಿ 2022 (15:06 IST)
ಕೆಲ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಭಾರಿ ಚರ್ಚೆಗೆ ಕಾರಣವಾಗಿದ್ದು, ಹಿಜಾಬ್ ಹಾಕಿಕೊಂಡು ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗಳಿಗೆ ಆಗಮಿಸುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
 
ಉಡುಪಿಯ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕ್ಲಾಸಿಗೆ ಬರುತ್ತಿರುವುದು ಸದ್ಯ ವಿವಾದಕ್ಕೆ ಕಾರಣವಾಗಿದೆ.
ಈ ಹಿಂದೆ ಹಿಜಾಬ್ ಧರಿಸಿ ಬಂದರೂ ತರಗತಿಗಳಲ್ಲಿ ಹಿಜಾಬ್ ತೆಗೆದಿರಿಸಿ ಪಾಠ ಕೇಳುತ್ತಿದ್ದರು. ಆದರೆ ಇತ್ತೀಚೆಗೆ ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
 
ಈ ನಡುವೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ಕೊಟ್ಟರೆ ಹಿಂದೂ ವಿದ್ಯಾರ್ಥಿನಿಯರಿಗೆ ಕೇಸರಿ ಶಾಲು ಧರಿಸಲು ಅವಕಾಶ ನೀಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಸದ್ಯಕ್ಕೆ ಆನ್ ಲೈನ್ ಕ್ಲಾಸ್ ಮುಂದುವರೆಸಲು ತೀರ್ಮಾನಿಸಿದೆ.
 
ಚಿಕ್ಕಮಗಳೂರಿನ ಪದವಿ ಕಾಲೇಜಿನಲ್ಲಿ ಒಂದು ತಿಂಗಳ ಹಿಂದೆ ಇದೇ ಹಿಜಾಬ್ ವಿವಾದ ಭುಗಿಲೆದ್ದಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರಲು ಆರಂಭಿಸಿದರೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರಲು ಆರಂಭಸಿದ್ದರು. ಇದೀಗ ಉಡುಪಿ ಕಾಲೇಜಿನಲ್ಲಿ ಇದೇ ವಿವಾದ ಮುಂದುವರೆದಿದೆ.
 
ಕೆಲ ಕಾಲೇಜು ಆಡಳಿತ ಮಂಡಳಿ ಹಿಜಾಬ್ ಧರಿಸಲು ವಿರೋಧಿಸಿದರೆ, ಕೆಲ ಆಡಳಿತ ಮಂಡಳಿ ಮುಸ್ಲಿಂ ಸಮುದಾಯದ ಒತ್ತಡಕ್ಕೆ ಮಣಿದಿದೆ. ಈ ಹಿನ್ನೆಲೆಯಲ್ಲಿ ವಸ್ತ್ರಸಂಹಿತೆ ವಿಚಾರವಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ವಿದ್ಯಾರ್ಥಿಗಳ ವಸ್ತ್ರಸಂಹಿತೆ ಆಯ್ಕೆ ರೀತಿ ಕಾಲೇಜು ಹಂತದಲ್ಲಿ ಅನಗತ್ಯ ಗೊಂದಲಕ್ಕೆ ಹಾಗೂ ಪ್ರಚೋದನೆಗೆ ಕಾರಣವಾಗಲಿದೆ. ಹೀಗಾಗಿ ಶಿಕ್ಷಣ ಇಲಾಖೆ ವಸ್ತ್ರ ಸಂಹಿತೆ ನಿಗದಿಪಡಿಸಲು ಚಿಂತನೆ ನಡೆಸಿದ್ದು, ಉನ್ನತ ಮಟ್ಟದ ಸಮಿತಿ ರಚಿಸಲು ಮುಂದಾಗಿದೆ. ಸಮಿತಿ ವರದಿ ಬಳಿಕ ವಸ್ತ್ರಸಂಹಿತೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಿದ್ದು, ಅಲ್ಲಿಯವರೆಗೂ ಯಥಾಸ್ಥಿತಿ ಪಾಲಿಸುವಂತೆ ಸೂಚನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ