ನಷ್ಟದಲ್ಲಿದ್ದ ಕಂಪನಿ ಒಂದೇ ವರ್ಷದಲ್ಲಿ ಗಳಿಸಿದ್ದು 348.59 ಕೋಟಿ ಲಾಭ

ಸೋಮವಾರ, 12 ಆಗಸ್ಟ್ 2019 (16:02 IST)
ನಷ್ಟದಲ್ಲಿದ್ದ ಕಂಪನಿಯೊಂದು ಒಂದೇ ವರ್ಷದಲ್ಲಿ 348 ಕೋಟಿ ರೂಪಾಯಿಗೂ ಹೆಚ್ಚು ಲಾಭ ಗಳಿಸಿ ಗಮನ ಸೆಳೆದಿದೆ.

ಕಳೆದ ಕೆಲ ವರ್ಷಗಳಿಂದ ನಷ್ಟದಲ್ಲಿದ್ದ ಜೆಸ್ಕಾಂ ಕಂಪನಿಯಲ್ಲಿ ಅನಧಿಕೃತ ವಿದ್ಯುತ್ ಸಂಪರ್ಕಗಳಿಗೆ ಬ್ರೆಕ್ ಹಾಕಿ ವಿದ್ಯುತ್ ಸೋರಿಕೆಯನ್ನು ತಡೆಗಟ್ಟಿ ಗುಣಮಟ್ಟದ ವಿದ್ಯುತ್ ಜಾಲ ಅಳವಡಿಕೆ ಮಾಡಿದೆ. ಈ ಕ್ರಮ ಸೇರಿದಂತೆ ಹಲವಾರು ಸುಧಾರಣಾ ಕ್ರಮದ ಫಲವಾಗಿ 2018-19ರಲ್ಲಿ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯು 348.59 ಕೋಟಿ ರೂ. ನಿವ್ವಳ ಲಾಭ ಗಳಿಸಿ ಕಂಪನಿಯೂ ತನ್ನ ಇತಿಹಾಸದಲ್ಲಿಯೆ ಹೊಸ ಆರ್ಥಿಕ ಮೈಲಿಗಲ್ಲು ಸಾಧಿಸಿದೆ.

2002 ರಲ್ಲಿ ಸ್ಥಾಪನೆಯಾದ ಜೆಸ್ಕಾಂ ಕಂಪನಿ ನಿರಂತರ ನಷ್ಟಕ್ಕೆ ತುತ್ತಾಗುತ್ತಿತ್ತು. 2017-18ರಲ್ಲಿ 472.63 ಕೋಟಿ ರೂ. ಕಂಪನಿ ನಷ್ಟ ಅನುಭವಿಸಿತ್ತು. ಜೆಸ್ಕಾಂ ಈಗಿನ ವ್ಯವಸ್ಥಾಪಕ ನಿರ್ದೇಶಕಿ ಡಾ. ಆರ್.ರಾಗಪ್ರಿಯಾ ಅವರ ಕೆಲವು ದಿಟ್ಟ ನಿರ್ಧಾರಗಳು ಕಂಪನಿಯನ್ನು ನಷ್ಟದಿಂದ ಆರ್ಥಿಕ ಚೇತರಿಕೆ ಕಾಣಲು ಸಾಧ್ಯವಾಗಿದೆ. ಲಾಭದಿಂದ ಸಂಸ್ಥೆಗೆ ಹೊಸ ಯೋಜನೆಗಳ ಹಾಕಿಕೊಳ್ಳಲು ಆರ್ಥಿಕ ಬಲ ಬಂದಂತಾಗಿದೆ.

2018-19ನೇ ಸಾಲಿನ ಆದಾಯ ಮತ್ತು ಖರ್ಚಿನ ಲೆಕ್ಕ: 2018-19ನೇ ಸಾಲಿನಲ್ಲಿ ವಿದ್ಯುತ್ ಮಾರಾಟದಿಂದ 5078.78 ಕೋಟಿ ರೂ. ಹಾಗೂ ಇತರೆ ಮೂಲದಿಂದ 50.47 ಕೋಟಿ ರೂ. ಸೇರಿದಂತೆ ಒಟ್ಟಾರೆ 5129.25 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ವರ್ಷ 2017-18ರಲ್ಲಿ ವಿದ್ಯುತ್ ಮಾರಾಟದ ಆದಾಯ 4291.75  ಮತ್ತು ಇತರೆ ಆದಾಯ 74.44 ಕೋಟಿ ರೂ. ಇತ್ತು.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ವಿದ್ಯುತ್ ಮಾರಾಟ ಆದಾಯದಲ್ಲಿ ಶೇ.18.34ರಷ್ಟು ಆದಾಯ ಏರಿಕೆಯಾಗಿದೆ. ಈ ವರ್ಷದಲ್ಲಿ ವಿದ್ಯುತ್ ಖರೀದಿಗೆ 3961.61, ಸಿಬ್ಬಂದಿ ಮತ್ತು ಇತರೆ ನಿರ್ವಹಣೆ ವೆಚ್ಚಕ್ಕೆ 730.31, ಸವಕಳಿಗೆ 145.05, ಬಡ್ಡಿ ಮತ್ತು ಆರ್ಥಿಕ ವೆಚ್ಚಕ್ಕೆ 284.78 ಹೀಗೆ ಒಟ್ಟು 5121.75 ಕೋಟಿ ರೂ. ವೆಚ್ಚ ಮಾಡಲಾಗಿದೆ. ಲಾಭ 7.49 ಮತ್ತು ನಿಯಂತ್ರಕ ಆದಾಯ, ಹೊಂದಾಣಿಕೆ ಮೊತ್ತ 341.09 ಸೇರಿಸಿದಲ್ಲಿ ಆರ್ಥಿಕ ಸಾಲಿನಲ್ಲಿ 348.59 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ