ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ?

ಶನಿವಾರ, 28 ಮೇ 2022 (10:33 IST)
ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
 
ಇದೀಗ ಕಾಂಗ್ರೆಸ್ ನಲ್ಲಿ ದೊಡ್ಡವರಿಗೊಂದು ನ್ಯಾಯ ಚಿಕ್ಕವರಿಗೊಂದು ನ್ಯಾಯ ಎಂಬಂತಾಗಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ದೊಡ್ಡವರು ಏನು ಬೇಕಾದರೂ ಮಾತನಾಡಬಹುದು, ಸಾಮಾನ್ಯ ಕಾರ್ಯಕರ್ತರು ಮಾತನಾಡಿದರೆ, ನೋಟಿಸ್ ಗ್ಯಾರಂಟಿ ಎನ್ನುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವರ್ತಿಸುತ್ತಿದೆ ಎಂದು ಹಲವರು ಕಿಡಿಕಾರಿದ್ದಾರೆ.

ಪರಿಷತ್ ಸ್ಥಾನಕ್ಕೆ ಮಹಿಳೆಯರಿಗೆ ಅವಕಾಶ ಕೊಡದ್ದಕ್ಕೆ ಆಕ್ಷೇಪವೆತ್ತಿದ ಕವಿತಾ ರೆಡ್ಡಿಗೆ ಶಿಸ್ತು ಪಾಲನಾ ಸಮಿತಿ ನೋಟಿಸ್ ನೀಡಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧವೇ ಹಿಗ್ಗಾಮುಗ್ಗಾ ಜಾಡಿಸಿದ ರಮ್ಯಾಗೆ ನೋಟಿಸ್ ನೀಡದೇ ಫುಲ್ ಸೈಲೆಂಟ್ ಆಗಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ.
ಮಾಜಿ ಸಂಸದೆ ರಮ್ಯಾ ಅಂದರೆ ಕೆಪಿಸಿಸಿ ಆಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಅಷ್ಟೊಂದು ಭಯವೇ ಎಂಬ ಪ್ರಶ್ನೆಗಳು ಕಾರ್ಯಕರ್ತರ ವಲಯದಿಂದಲೇ ಎದ್ದಿದೆ. 

ಡಿಕೆಶಿ ಈ ಹಿಂದೆಯೂ ಸಾಮಾನ್ಯ ಕಾರ್ಯಕರ್ತರ ಮೇಲೆ ಕ್ರಮ ಕೈಗೊಂಡು ನಾಯಕರ ವಿಚಾರದಲ್ಲಿ ಸೈಲೆಂಟ್ ಆಗಿದ್ದರು. ಸಲೀಂ – ಉಗ್ರಪ್ಪ ಪ್ರಕರಣದಲ್ಲಿ ಸಲೀಂ ವಿರುದ್ಧ ಕ್ರಮ ಕೈಗೊಂಡು ಉಗ್ರಪ್ಪನವರನ್ನು ಹಾಗೆಯೇ ಬಿಟ್ಟಿದ್ದರು. ಮಾಜಿ ಶಾಸಕ ಅಶೋಕ್ ಪಟ್ಟಣ್ ಪ್ರಕರಣದಲ್ಲಿ ಕಾರಣ ಕೇಳಿ ನೋಟಿಸ್ ಜಾರಿಯಾದರೂ ಅಷ್ಟಕ್ಕೆ ಪ್ರಕರಣ ಕೈಬಿಟ್ಟಿದ್ದರು.

ಹೋದಲ್ಲಿ ಬಂದಲ್ಲಿ ಮುಂದಿನ ಸಿಎಂ ಬಗ್ಗೆ ಹೇಳಿಕೆ ಕೊಡುತ್ತಿರುವ ಶಾಸಕ ಜಮೀರ್ ವಿರುದ್ಧವೂ ಯಾವುದೇ ಶಿಸ್ತುಕ್ರಮವಿಲ್ಲ. ಆದರೆ ಪರಿಷತ್ ಚುನಾವಣೆ ಟಿಕೆಟ್ ಬಗ್ಗೆ ಮಾತನಾಡಿದ್ದ ಕವಿತಾ ರೆಡ್ಡಿಗೆ ಮಾತ್ರ ನೋಟಿಸ್ ಜಾರಿಗೊಳಿಸಿದ್ದಕ್ಕೆ ಕಾಂಗ್ರೆಸ್ ವಲಯದಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ