ಪಾಕಿಸ್ತಾನ ಪರ ಘೋಷಣೆಯ ಕೋಲಾಹಲಕ್ಕೆ ಸಾಕ್ಷಿಯಾಯ್ತು ಕಲಾಪ

geetha

ಬುಧವಾರ, 28 ಫೆಬ್ರವರಿ 2024 (19:23 IST)
ಬೆಂಗಳೂರು : ಸದನ ಪ್ರಾರಂಭವಾಗುತ್ತಿದ್ದಂತೆಯೇ ವಿಪಕ್ಷ ನಾಯಕ ಆರ್‌.ಅಶೋಕ್‌ ಎದ್ದು ನಿಂತು ಪಾಕಿಸ್ತಾನ ಪರ ಘೋಷಣೆಯ ವಿಷಯವನ್ನು ಪ್ರಸ್ತಾಪಿಸಿದರು.  ಕರ್ನಾಟಕದ ಶಕ್ತಿ ಕೇಂದ್ರ ಎಂದೇ ಬಿಂಬಿತವಾಗಿರುವ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಖಂಡನೀಯ. ಕಾಂಗ್ರೆಸ್‌ ಸರ್ಕಾರ ಇದುವರೆಗೂ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಗಡಿಯಲ್ಲಿ ಕಾಯುತ್ತಿರುವ ಯೋಧರಿಗೆ ಮುಖ ತೋರಿಸುವುದಾದರೂ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಬುಧವಾರ ನಡೆದ ಬಜೆಟ್‌ ನಿರ್ಣಯದ ಅಧಿವೇಶನ ಕಲಾಪ ಪಾಕಿಸ್ತಾನ ಪರ ಘೋಷಣೆಯ ಕೋಲಾಹಲಕ್ಕೆ ಸಾಕ್ಷಿಯಾಯ್ತು. ಮಂಗಳವಾರ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ವಿಜಯೋತ್ಸವದ ವೇಳೆ ಅಭಿಮಾನಿಯೊಬ್ಬ ಪಾಕ್‌ ಪರ ಘೋಷಣೆ ಕೂಗಿದ್ದಾನೆಲ್ಲಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ಆಗ್ರಹಿಸಿದೆ.

ಆರೋಪಿಯನ್ನು ಕಾಂಗ್ರೆಸಿಗರೇ ರಕ್ಷಿಸಿ ಸುರಕ್ಷಿತವಾಗಿ ಆತನನ್ನು ಹೊರಗೆ ಕಳಿಸಿದ್ದಾರೆ. ನಾಸಿರ್‌ ಹುಸೇನ್‌ ಅವರು ಈ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಅವಾಚ್ಯ ಶಬ್ದಗಳಿಂದ ಏಕವಚನದಲ್ಲಿ ನಿಂದಿಸಿದ್ದಾರೆ. ಕೂಡಲೇ ನಾಸಿರ್‌ ಹುಸೇನ್‌ ಅವರ ಸದಸ್ಯತ್ವವನ್ನು ರದ್ದು ಪಡಿಸಬೇಕೆಂದು ಆರ್‌. ಅಶೋಕ್‌ ಆಗ್ರಹಿಸಿದರು. 
 
ಇದಕ್ಕೆ ತಿರುಗೇಟು ನೀಡಿದ ದಿನೇಶ್‌ ಗುಂಡೂರಾವ್‌, ಈ ಕೃತ್ಯದ ಹಿಂದೆ ನಿಮ್ಮವರದೇ ಕೈವಾಡ ಇರಬಹುದು. ಈ ಹಿಂದೆ ಪಾಕ್‌ ಧ್ವಜ ಹಾರಿಸಿ ವಿವಾದ , ಗಲಭೆ ಎಬ್ಬಿಸಲು ಪ್ರಯತ್ನಿಸಿದ್ದಿರಿ ಎಂದು ಆರೋಪಿಸಿದರು. ಸಚಿವ ಜಮೀರ್‌ ಅಹ್ಮದ್‌ ಸಹ ಪ್ರತಿಕ್ರಿಯಿಸಿ, ಸಂಸದ್‌ ಭವನದಲ್ಲಿ ಬಾಂಬ್‌ ಇಡಲು ಯತ್ನಿಸಿದ ಆರೋಪಿಗೆ ಪಾಸ್‌ ನೀಡಿದ್ದವರು ನೀವು ಎಂದು ತಿರುಗೇಟು ನೀಡಿದರು. 
ಸದನದಲ್ಲಿ ಕೋಲಾಹಲದ ಸನ್ನಿವೇಶ ಸೃಷ್ಟಿಯಾದ ಕಾರಣ ಕಲಾಪವನ್ನು ಮುಂದೂಡಲಾಯಿತು. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ