ಲೈಂಗಿಕ ಅಲ್ಪಸಂಖ್ಯಾತರ ನೀತಿ ಜಾರಿಗೆ ಸರ್ಕಾರ ಚಿಂತನೆ

ಶುಕ್ರವಾರ, 27 ಅಕ್ಟೋಬರ್ 2017 (08:26 IST)
ಬೆಂಗಳೂರು: ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರಲು ರಾಜ್ಯ ಸರ್ಕಾರ ಲೈಂಗಿಕ ಅಲ್ಪ ಸಂಖ್ಯಾತರ ನೀತಿ ಜಾರಿಗೆ ತರಲು ತೀರ್ಮಾನಿಸಿದೆ. ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಮೊದಲ ಹೆಜ್ಜೆಯಾಗಿ ಮಂಗಳಮುಖಿಯರ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ನೀತಿ ತರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಶೇಷವಾಗಿ ಲೈಂಗಿಕ ಅಲ್ಪ ಸಂಖ್ಯಾತರಿಗೆ ಸರ್ಕಾರಿ ಸವಲತ್ತುಗಳನ್ನು ಒದಗಿಸುವ ಕುರಿತು ಸುದೀರ್ಘ‌ ಚರ್ಚೆ ನಡೆಸಲಾಯಿತು. ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಪ್ರತ್ಯೇಕ ನೀತಿ ಜಾರಿಗೊಳಿಸಿ, ಅಗತ್ಯ ಕಾನೂನು ರೂಪಿಸಿ ಮೀಸಲಾತಿ ಸೌಲಭ್ಯ ಜಾರಿಗೊಳಿಸುವ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

ಜೋಗಪ್ಪ, ಜೋಗತಿ, ಹಿಜ್ಡಾ, ಖೋತಿ, ಶಿವಶಕ್ತಿಗಳು ಮತ್ತು ಅರ್ವನಿಸ್‌, ಸಲಿಂಗ ರತಿಗಳು, ಪುರುಷತ್ವದಿಂದ ಮಹಿಳೆ, ಮಹಿಳೆಯಿಂದ ಪುರುಷರಾಗಿ ಲಿಂಗ ಪರಿವರ್ತಿಸಿಕೊಂಡವರು ಈ ನೀತಿ ವ್ಯಾಪ್ತಿಗೆ ಒಳಪಡಲಿದ್ದಾರೆ. ಇವರನ್ನು ತೃತಿಯ ಲಿಂಗಿಗಳು ಅಥವಾ ಲಿಂಗಪರಿವರ್ತಿತರು ಎಂದು ಕರೆಯಲು ತೀರ್ಮಾನಿಸಲಾಗಿದೆ.

ಹೊಸ ನೀತಿಯನ್ವಯ ಮಂಗಳ ಮುಖಿಯರನ್ನು ಸಾಮಾಜಿಕವಾಗಿ ಕೀಳು ಮಟ್ಟದಿಂದ ನೋಡುವಂತಿಲ್ಲ. ಬಸ್‌, ಪಾರ್ಕ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ತಾರತಮ್ಯ ಮಾಡುವಂತಿಲ್ಲ. ಮಂಗಳಮುಖಿಯರ ಲಿಂಗತ್ವ ಕಾರಣಕ್ಕೆ ಸಂವಿಧಾನಿಕವಾಗಿ ದೊರೆಯುವ ವಾಕ್‌ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸುವಂತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ