ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ಮೇಲಿದೆ ಮೂವರ ಕಣ್ಣು: ವಿಜಯೇಂದ್ರ ಅವಧಿ ಸದ್ಯದಲ್ಲೇ ಮುಕ್ತಾಯ

Krishnaveni K

ಬುಧವಾರ, 1 ಜನವರಿ 2025 (10:55 IST)
ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅಧಿಕಾರಾವಧಿ ಸದ್ಯದಲ್ಲೇ ಮುಗಿಯಲಿದ್ದು ಮೂವರು ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಮುಂದಿನ ಅಧ್ಯಕ್ಷ ಯಾರಾಗಲಿದ್ದಾರೆ ಎಂಬ ಕುತೂಹಲವಿದೆ.

ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಅವಧಿ ವಿಸ್ತರಿಸಲು ಬಯಸುತ್ತಿದ್ದಾರೆ. ಆದರೆ ಅವರ ಮೇಲೆ ಕೆಲವು ನಾಯಕರು ಈಗಾಗಲೇ ಬಂಡಾಯವೆದ್ದಿದ್ದಾರೆ. ಹೀಗಾಗಿ ಮತ್ತೆ ಅವರನ್ನೇ ಮುಂದುವರಿಸಿದರೆ ಈ ನಾಯಕರ ಆಕ್ರೋಶ ಹೆಚ್ಚಾಗುವುದು ಖಚಿತ. ಈ ಹಿನ್ನಲೆಯಲ್ಲಿ ವಿಜಯೇಂದ್ರ ವಿಚಾರದಲ್ಲಿ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆಯಿಡಬೇಕಾಗುತ್ತದೆ.ಆದರೆ ಅಷ್ಟು ಸುಲಭವಾಗಿ ರಾಜ್ಯ ಬಿಜೆಪಿ ಚುಕ್ಕಾಣಿ ತಮ್ಮ ಕೈ ತಪ್ಪಿ ಹೋಗಲು ಬಿಎಸ್ ಯಡಿಯೂರಪ್ಪ ಬಿಡಲ್ಲ ಎನ್ನುವುದೂ ಅಷ್ಟೇ ಸತ್ಯ.

ಬಸವರಾಜ ಬೊಮ್ಮಾಯಿಗೆ ಪಟ್ಟ
ಒಂದು ವೇಳೆ ವಿಜಯೇಂದ್ರಗೆ ಎರಡನೇ ಅವಧಿಗೆ ಅಧ್ಯಕ್ಷ ಪಟ್ಟ ವಿಸ್ತರಣೆ ಮಾಡಲು ಹೈಕಮಾಂಡ್ ಒಪ್ಪದೇ ಇದ್ದರೆ ಬಸವರಾಜ ಬೊಮ್ಮಾಯಿಯವರನ್ನು ಆ ಪಟ್ಟಕ್ಕೇರಿಸಲು ಯಡಿಯೂರಪ್ಪ ಹೈಕಮಾಂಡ್ ಮನ ಒಲಿಸಲಿದ್ದಾರೆ. ಬೊಮ್ಮಾಯಿ ತಮ್ಮ ಆಪ್ತರಾಗಿದ್ದು ಅವರು ಅಧ್ಯಕ್ಷರಾದರೂ ಬಿಜೆಪಿ ಮೇಲೆ ಹಿಡಿತ ಸಾಧಿಸಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ. ಈ ಕಾರಣಕ್ಕೆ ಈಗಾಗಲೇ ಗುಪ್ತವಾಗಿ ಬೊಮ್ಮಾಯಿ ಜೊತೆ ಅವರು ಮಾತುಕತೆಯನ್ನೂ ನಡೆಸಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ.

ಶೋಭಾ ಕರಂದ್ಲಾಜೆ
ಒಂದು ವೇಳೆ ಬೊಮ್ಮಾಯಿ ಬೇಡ ಎಂದಾದರೆ ಶೋಭಾ ಕರಂದ್ಲಾಜೆಗೆ ಅಧ್ಯಕ್ಷಗಿರಿ ಕೊಡಲು ಯಡಿಯೂರಪ್ಪ ಡಿಮ್ಯಾಂಡ್ ಮಾಡಬಹುದು. ಶೋಭಾಗೆ ಎಲ್ಲಾನಾಯಕರ ಜೊತೆ ಉತ್ತಮ ಸಂಬಂಧವಿದೆ. ಹೀಗಾಗಿ ಅವರನ್ನು ಆಯ್ಕೆ ಮಾಡಿದರೆ ಯಾರೂ ವಿರೋಧಿಸಲ್ಲ ಎಂಬ ಲೆಕ್ಕಾಚಾರವೂ ಇದೆ. ಜೊತೆಗೆ ಅವರಿಗೆ ತಟಸ್ಥ ನಾಯಕರ ಬೆಂಬಲವೂ ಇದೆ. ಒಟ್ಟಿನಲ್ಲಿ ಸದ್ಯದಲ್ಲೇ ಹೊಸ ನಾಯಕನ ಆಯ್ಕೆ ಬಗ್ಗೆ ಅಧಿಕೃತ ತೀರ್ಮಾನ ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ