ಇಂದು ಸಿಎಂ ಪುತ್ರನ ಅಂತ್ಯಕ್ರಿಯೆ

ಸೋಮವಾರ, 1 ಆಗಸ್ಟ್ 2016 (07:08 IST)
ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ಬೆಲ್ಜಿಯಂನಲ್ಲಿ ಅಕಾಲಿಕ ಮರಣವನ್ನಪ್ಪಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಅಂತ್ಯಕ್ರಿಯೆ ಟಿ.ಕಾಟೂರಿನ ಫಾರಂ ಹೌಸ್‌ನಲ್ಲಿ ಸೋಮವಾರ ನಡೆಯಲಿದೆ.


ದುಬೈ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಳೆ ಬೆಳಗ್ಗೆ 9ಗಂಟೆಯೊಳಗೆ ವಿಶೇಷ ವಿಮಾನ ಆಗಮಿಸುವ ನಿರೀಕ್ಷೆ ಇದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಳೀಯ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ನೇರವಾಗಿ ಮೈಸೂರಿಗೆ ತೆಗೆದುಕೊಂಡು ಬರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮೈಸೂರಿನ ದಸರ ವಸ್ತು ಪ್ರದರ್ಶನದಲ್ಲಿ  ನಿರ್ಮಿಸಲಾಗಿರುವ ವೇದಿಕೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೂ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ  ಅವಕಾಶ ಮಾಡಿಕೊಡಲಾಗುವುದು. ಬಳಿಕ ಟಿ. ಕಾಟೂರು ಗ್ರಾಮದ ಫಾರಂಹೌಸ್‍ನಲ್ಲಿ ಮಧ್ಯಾಹ್ನ 3 ಗಂಟೆಗೆ ಅಂತ್ಯ ಸಂಸ್ಕಾರ ನಡೆಸಲಾಗುವುದು.

ಮೈಸೂರು ನಗರದಲ್ಲಿ ಪಕ್ಷದ ಕಾರ್ಯಕರ್ತರ, ಅಭಿಮಾನಿಗಳ ಶೋಕ ಮಡುಗಟ್ಟಿದ್ದು ಅಂತಿಮ ಸಂಸ್ಕಾರಕ್ಕೆ ಅಪಾರ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ.

ಪುತ್ರ ರಾಕೇಶ್ ಸಾವಿಗೆ ಸಂತಾಪ ಸೂಚಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಬೆಲ್ಜಿಯಂನಿಂದ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ರಾಕೇಶ್ ಸಾವಿಗೆ ಸಂತಾಪ ಸೂಚಿಸಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ