ರಾಮನಗರ : ಫೆ.28ರಿಂದ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್ ಆರಂಭವಾಗಲಿದೆ. ಬೆಂಗಳೂರು-ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್ ಕಾರ್ಯಾಚರಣೆ ಮಂಗಳವಾರದಿಂದ ಶುರುವಾಗಲಿದೆ.
ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ವಸೂಲಿ ಕುರಿತು ಕೇಂದ್ರ ಹೆದ್ದಾರಿ ಪ್ರಾಧಿಕಾರದಿಂದ ಪ್ರಕಟಣೆ ಹೊರಡಿಸಿದೆ.
ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಪಡಿಸಿರುವ ಹೆದ್ದಾರಿ ಪ್ರಾಧಿಕಾರ ಸರ್ವೀಸ್ ರಸ್ತೆ ಹೊರತುಪಡಿಸಿ, ಉಳಿದ ಆರು ಪಥಗಳಿಗೆ ಶುಲ್ಕ ನಿಗದಿ ಮಾಡಿದೆ. ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ನಡುವೆ ಸಂಚಾರ ಸಮಯವನ್ನು ಕಡಿಮೆ ಮಾಡುವ ಸಲುವಾಗಿ ಸರ್ಕಾರ ನೂತನ ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕೆ ಮುಂದಾಗಿತ್ತು.
ಎರಡು ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಈ ಹೆದ್ದಾರಿಯ ಮೊದಲ ಹಂತದ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಎರಡನೆ ಹಂತದ ಕಾಮಗಾರಿಯು ಚಾಲ್ತಿಯಲ್ಲಿದ್ದು, ಮುಕ್ತಾಯದ ಹಂತ ತಲುಪಿದೆ.
ಎರಡು ಹಂತದ ಕಾಮಗಾರಿ ಮುಗಿಯುವ ಮುನ್ನವೇ ಸರ್ಕಾರ ಮೊದಲ ಹಂತದ ಸಂಚಾರಕ್ಕೆ ಟೋಲ್ ದರ ನಿಗದಿ ಪಡಿಸಿದೆ. ಫೆ.28ರ ಮಂಗಳವಾರದಿಂದಲೇ ಈ ನಿಯಮ ಜಾರಿಗೆ ಬರಲಿದೆ.