ರಾಜ್ಯದಲ್ಲಿ ಟೊಮೊಟೋ ಬೆಲೆ ಏರಿಕೆ

ಭಾನುವಾರ, 10 ಅಕ್ಟೋಬರ್ 2021 (17:23 IST)
ರಾಜ್ಯದಲ್ಲಿ ಈಗಾಗಲೇ ಜನ ಪೆಟ್ರೋಲ್ (Petrol Price), ಡೀಸೆಲ್ ಮತ್ತು ಅಡುಗೆ ಎಣ್ಣೆಯ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಇದರ ಮಧ್ಯೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಟೊಮೊಟೋ(Tomato) ಬೆಲೆ ಹೆಚ್ಚಾಗುತ್ತಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
 
ಬೆಂಗಳೂರು ಹಾಗೂ ಕರ್ನಾಟಕದ(Karnataka) ವಿವಿಧ ಜಿಲ್ಲೆಗಳಲ್ಲಿ ಟೊಮೆಟೊ ಬೆಲೆ ಏಕಾಏಕಿ ಏರಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಕೆ.ಜಿ ಗೆ 60 ರೂ ಇದೆ.
 
ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇದು ಟೊಮೊಟೋ ಬೆಳೆ ಮೇಲೆ ಪರಿಣಾಮ ಬೀರಿದೆ. ಅಲ್ಲದೇ ಇದರಿಂದ ಟೊಮೊಟೋ ಪೂರೈಕೆ ಕಡಿಮೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಹಾಗೂ ಮಹಾರಾಷ್ಟ್ರದಿಂದ ಟೊಮೆಟೊ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಸೆಪ್ಟೆಂಬರ್ ಆರಂಭದಲ್ಲಿ ಕೆ.ಜಿಗೆ 10 ರೂ ಇದ್ದ ಟೊಮೆಟೊ ಬೆಲೆ ಕೊನೆಗೆ ಕೆ.ಜಿಗೆ ಗರಿಷ್ಠ 15 ರೂ ಹೆಚ್ಚಾಗಿತ್ತು, ಇದೀಗ ಸಧ್ಯದಲ್ಲೇ ನೂರಾರ ಗಡಿ ದಾಟಬಹುದು ಎಂದು ಹೇಳಲಾಗುತ್ತಿದೆ.
 
ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬೆಂಗಾಲ ಹಾಗೂ ಒಡಿಶಾ ರಾಜ್ಯಗಳು ದೇಶದಲ್ಲಿ ಹೆಚ್ಚು ಟೊಮ್ಯಾಟೊ ಬೆಳೆಯುತ್ತವೆ ಆದರೆ ಕಳೆದ ಸುಮಾರು ಒಂದು ತಿಂಗಳಿನಿಂದ ಟೊಮೊಟೋ ಬೆಳೆಯುವ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಇದು ಟೊಮೊಟೋ ಬೆಳೆಯ ಉತ್ಪಾದನೆಯ ಮೇಲೆ ಶೇ 50 ರಷ್ಟು ಪರಿಣಾಮ ಬೀರಿರುವುದು ನಿಜಕ್ಕೂ ಆತಂಕದ ಸಂಗತಿ.
 
 
ಕೋಲಾರ, ಚಿಂತಾಮಣಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಮಾಲೂರು, ಮಾಗಡಿ ಹಾಗೂ ಸುತ್ತಮುತ್ತಲ ಪ್ರದೇಶದಿಂದ ಎಪಿಎಂಸಿಗೆ ಟೊಮೆಟೋ ಸಾಗಣೆ ಶೆ 40 ರಷ್ಟು ಕಡಿಮೆಯಾಗಿದ್ದು, ಹೀಗೆ ಪೂರೈಕೆ ಕಡಿಮೆ ಆದಲ್ಲಿ ಬೆಲೆ ನೂರಾರ ಗಡಿ ದಾಟುವುದರಲ್ಲಿ ಅನುಮಾನವಿಲ್ಲ.
 
ಟೊಮೊಟೋ ಮಾತ್ರವಲ್ಲದೇ ಈರುಳ್ಳಿ ಬೆಲೆಯಲ್ಲೂ ಏರಿಕೆಯಾಗಿದ್ದು, ಈ ಬೆಲೆಗಳು ಜನರಲ್ಲಿ ಕಣ್ಣೀರು ತರಿಸುತ್ತಿವೆ. ಜುಲೈ ಮತ್ತು ಆಗಸ್ಟ್ ತಿಂಗಳಿಗೆ ಹೋಲಿಸಿದ್ರೆ ಈರುಳ್ಳಿಯ ಬೆಲೆಗಳು ಈಗ ಹೆಚ್ಚಾಗಿವೆ. ಮುಂದಿನ ದಿನಗಳಲ್ಲಿ ಈ ಬೆಲೆಗಳು ದುಪ್ಪಟ್ಟಾಗುವ ಎಲ್ಲಾ ಸಾಧ್ಯತೆಗಳಿವೆ.
 
ತರಕಾರಿಗಳು ಪ್ರತಿನಿತ್ಯದ ಅಗತ್ಯ ವಸ್ತುಗಳಲ್ಲಿ ಒಂದು. ಈಗಾಗಲೇ ಹಲವಾರು ತರಕಾರಿಗಳ ಬೆಲೆ ಹೆಚ್ಚಾಗಿದೆ. ಬೆಲೆಗಳ ನಿರಂತರ ಏರಿಕೆಯಿಂದ ಜನರ ಬದುಕು ನಿಜಕ್ಕೂ ಕಷ್ಟಕರವಾಗುತ್ತಿದೆ. ಕೊರೊನಾ ಸೋಂಕಿನಿಂದ ಆರ್ಥಿಕವಾಗಿ ಪ್ರತಿಯೊಬ್ಬರು ಹೊಡೆತ ತಿಂದಿದ್ದಾರೆ. ಈಗಾಗಲೇ ಎರೆಡು ಲಾಕ್​ಡೌನ್ ಜನರನ್ನು ಕಂಗೆಡಿಸಿದೆ ಈ ಮಧ್ಯೆ ಬೇಳೆಕಾಳು, ಆಹಾರ ಪದಾರ್ಥ, ಹಣ್ಣು, ತರಕಾರಿಗಳ ಬೆಲೆ ಏರಿದರೆ ಅದು ಅವರ ಬದುಕನ್ನು ದುಸ್ತರಗೊಳಿಸುತ್ತದೆ.
 
ಕೆಳ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯ. ಹೀಗೆ ಬೆಲೆ ಏರಿಕೆ ಹೆಚ್ಚಾದರೆ ಬದುಕು ಬೀದಿಗೆ ಬರುವುದು ಸತ್ಯ. ಬೆಲೆ ಏರಿಕೆ ಬಿಸಿ ಜನಸಾಮಾನ್ಯರ ನಿದ್ದೆಗೆಡಿಸಿದೆ. ಬೇಳೆ ಕಾಳುಗಳು, ಅಕ್ಕಿ, ತರಕಾರಿ ಎಲ್ಲದರ ಬೆಲೆ ಹೆಚ್ಚಾದರೆ ಬದುಕುವುದು ಹೇಗೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ