ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಸೋಮವಾರ ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಪೂಜೆ ನೆರವೇರಿಸಿದರು. ಯದುವೀರ ಅವರು ಶುಭ್ರವಸ್ತ್ರಧಾರಿಯಾಗಿ ಅರಮನೆಯಲ್ಲಿನ ಆಯುಧಗಳಿಗೆ ಪೂಜೆ ನೆರವೇರಿಸಿ, ಖಾಸಗಿ ದರ್ಬಾರ್ ನಡೆಸಿದರು.ಪಟ್ಟದ ಆನೆ, ಕುದುರೆ, ಹಾಗೂ ವಾಹನಗಳಿಗೆ ಅವರು ಪೂಜೆ ಸಲ್ಲಿಸಿದರು.
ಈ ಮಧ್ಯೆ, ಮಂಗಳವಾರ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ನಡೆಯಲಿದ್ದು, ಇದರೊಂದಿಗೆ ಕಳೆದ ಹತ್ತು ದಿನಗಳಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿರುವ ನಾಡಹಬ್ಬಕ್ಕೆ ತೆರೆ ಬೀಳಲಿದೆ. ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು, ಚಿನ್ನದ ಅಂಬಾರಿಯಲ್ಲಿ ಸಾಗುವ ನಾಡದೇವತೆ ಚಾಮುಂಡೇಶ್ವರಿಗೆ ಭಕ್ತಿಭಾವದಿಂದ ನಮಿಸಲು ದೇಶ-ವಿದೇಶಗಳ ಸಹಸ್ರಾರು ಪ್ರವಾಸಿಗರು ಸಾಂಸ್ಕೃತಿಕ ನಗರಿಯತ್ತ ಧಾವಿಸುತ್ತಿದ್ದು, ಅರಮನೆ ನಗರಿ ರಂಗೇರುತ್ತಿದೆ. ಜಂಬೂಸವಾರಿ ವೀಕ್ಷಣೆಗೆ ಆಗಮಿಸುವ ಅತಿ ಗಣ್ಯರು, ಗಣ್ಯರು, ಆಹ್ವಾನಿತರು, ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಹೊಂದಿರುವವರಿಗೆ ಅರಮನೆ ಆವರಣದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ.