ಅತಿಯಾದ ಓಲೈಕೆಯೇ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ಮುಳುವಾಯಿತು: ಆರ್‌ ಅಶೋಕ್

Sampriya

ಬುಧವಾರ, 9 ಅಕ್ಟೋಬರ್ 2024 (14:11 IST)
ಬೆಂಗಳೂರು: ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಯ ಫಲಿತಾಂಶ ನನ್ನ ಮಾತನ್ನ ಸಾಬೀತು ಪಡಿಸಿದೆ. ಎಲ್ಲಿಯವರೆಗೂ ಪರ್ಯಾಯ ಆಯ್ಕೆ ಇರುವುದಿಲ್ಲವೋ ಅಲ್ಲಿಯವರೆಗೆ ಮಾತ್ರ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಾರೆ ಎಂಬ ಕಟು ಸತ್ಯವನ್ನ ಕಾಂಗ್ರೆಸ್ ಪಕ್ಷ ಈಗಲಾದರೂ ಅರ್ಥ ಮಾಡಿಕೊಳ್ಳಬೇಕೆಂದು ವಿಪಕ್ಷ ಆರ್‌ ಅಶೋಕ್ ಹೇಳಿದರು.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆರ್‌ ಅಶೋಕ್ ಅವರು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ರಾಜ್ಯಸಭಾ ಸದಸ್ಯ ನಾಸೀರ್ ಅಹ್ಮದ್ ಅವರ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿ ಸದನದಲ್ಲಿ ಮಾತಾನಾಡುವಾಗ  ಅತಿಯಾದ ಮುಸ್ಲಿಂ ಓಲೈಕೆ, ವ್ಯಾಮೋಹ, ತುಷ್ಟೀಕರಣವೇ ಕಾಂಗ್ರೆಸ್ ಪಕ್ಷಕ್ಕೆ
ಮುಂದೊಂದು ದಿನ ಮುಳುವಾಗುತ್ತೆ ಎಂದು ಭವಿಷ್ಯ ನುಡಿದಿದ್ದೆ.

ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಯ ಫಲಿತಾಂಶ ನನ್ನ ಮಾತನ್ನ ಸಾಬೀತು ಪಡಿಸಿದೆ. ಎಲ್ಲಿಯವರೆಗೂ ಪರ್ಯಾಯ ಆಯ್ಕೆ ಇರುವುದಿಲ್ಲವೋ ಅಲ್ಲಿಯವರೆಗೆ ಮಾತ್ರ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಾರೆ ಎಂಬ ಕಟು ಸತ್ಯವನ್ನ ಕಾಂಗ್ರೆಸ್ ಪಕ್ಷ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು.

ಮುಸ್ಲಿಂ ಬಾಹುಳ್ಯದ ಕಾಶ್ಮೀರ ಪ್ರಾಂತ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಗತ್ಯವೇ ಇಲ್ಲ ಎನ್ನುವ ಧಾಟಿಯಲ್ಲಿ ಇಂಡಿ ಮಿತ್ರ ಪಕ್ಷ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಓಮರ್ ಅಬ್ದುಲ್ಲಾ ಅವರು ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಬಾಹುಳ್ಯದ ಜಮ್ಮು ಪ್ರಾಂತ್ಯದ ಮೇಲೆ ಗಮನ ಹರಿಸಲು ಬಹಿರಂಗ ಸಲಹೆ ನೀಡಿದ್ದರು. ಆದರೆ ಅತ್ತ ಮುಸ್ಲಿಮರ ಮತಗಳೂ ಇಲ್ಲದೆ, ಇತ್ತ ಹಿಂದೂಗಳ ಮತಗಳೂ ಇಲ್ಲದೆ ಕಾಂಗ್ರೆಸ್ ಪಕ್ಷ ಜಮ್ಮು-ಕಾಶ್ಮೀರದಲ್ಲಿ ಸಂಪೂರ್ಣವಾಗಿ ಸೋತು ಸುಣ್ಣವಾಗಿದೆ.

2014ರ ವಿಧಾನಸಭಾ ಚುನಾವಣೆಯಲ್ಲಿ 18% ಮತ ಪ್ರಮಾಣದ ಮೂಲಕ 12 ಸ್ಥಾನ ಗೆದಿದ್ದ ಕಾಂಗ್ರೆಸ್ ಪಕ್ಷ, 2024ರಲ್ಲಿ 12% ಮತ ಪಡೆಯುವ ಮೂಲಕ ಕೇವಲ 6 ಸ್ಥಾನಗಳಿಗೆ ಸೀಮಿತವಾಗಿದೆ. ಹಿಂದೂ ಬಾಹುಳ್ಯದ ಜಮ್ಮುವಿನಲ್ಲಿ ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ದ 29 ಸ್ಥಾನಗಳಲ್ಲಿ ಕೇವಲ 1 ಸ್ಥಾನ ಗೆಲ್ಲಲು ಸಾಧ್ಯವಾಗಿದೆ.

ಮತ್ತೊಂದು ಕಡೆ 2014ರಲ್ಲಿ 25 ಸೀಟು ಪಡೆದಿದ್ದ ಬಿಜೆಪಿ 2024ರಲ್ಲಿ 29 ಸೀಟು ಪಡೆದಿದೆ. 25.64% ಮತ ಗಳಿಸುವ ಮೂಲಕ ಮತಗಳಿಕೆ ಪ್ರಮಾಣದಲ್ಲಿ ನಷ್ಯಾನಲ್ ಕಾನ್ಫರೆನ್ಸ್ ಪಕ್ಷವನ್ನೂ ಮೀರಿಸಿ ಬಿಜೆಪಿ ಮೊದಲ ಸ್ಥಾನ ಪಡೆದಿದೆ.

ಪ್ರಜ್ಞಾವಂತ ಮತದಾರರು ಅಭಿವೃದ್ದಿ ರಾಜಕಾರಣಕ್ಕೆ ಮತ ನೀಡುತ್ತಾರೆ, ಓಲೈಕೆ ರಾಜಕಾರಣವನ್ನು ತಿರಸ್ಕರಿಸುತ್ತಾರೆ ಎನ್ನುವುದಕ್ಕೆ ಜಮ್ಮು ಕಾಶ್ಮೀರದ ಚುನಾವಣೆಯೇ ಸಾಕ್ಷಿ.

ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಈಗಲಾದರೂ ಎಚ್ಚೆತ್ತುಕೊಂಡು, ಓಲೈಕೆ, ತುಷ್ಟೀಕರಣದ ರಾಜಕಾರಣ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಲಿ. ಇಲ್ಲವಾದರೆ ಜಮ್ಮು ಕಾಶ್ಮೀರದಲ್ಲಿ, ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದಿರುವ ಗತಿಯೇ ಕರ್ನಾಟಕದಲ್ಲಿಯೂ ಬರುವುದು ನಿಶ್ಚಿತ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ