ಬೆಂಗಳೂರು: ದೇಶದಲ್ಲಿ ಓಮಿಕ್ರಾನ್ ನಾಗಾಲೋಟ ಮುಂದುವರಿದಿದ್ದು, ಒಟ್ಟು ಕೇಸ್‍ಗಳ ಸಂಖ್ಯೆ 422ಕ್ಕೆ ಏರಿಕೆ ಕಂಡಿದೆ. ಮಧ್ಯಪ್ರದೇಶ, ಹಿಮಾಚಲಪ್ರದೇಶದಲ್ಲಿ ಒಂದೊಂದು ಕೇಸ್ ದಾಖಲಾಗುವ ಮೂಲಕ ಓಮಿಕ್ರಾನ್ ಸೋಂಕಿತ ರಾಜ್ಯಗಳ ಸಂಖ್ಯೆ 19ಕ್ಕೆ ಏರಿದೆ.
ವ್ಯಾಕ್ಸಿನ್ ಹಾಕಿಸಿಕೊಳ್ಳದವರೇ ಓಮಿಕ್ರಾನ್ ಸೂಪರ್ ಸ್ಪ್ರೆಡರ್ ಅಂತ ದಕ್ಷಿಣ ಆಫ್ರಿಕಾದ ವೈದ್ಯರು ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ಲಸಿಕೆ ಪಡೆದವರು ಹಾಗೂ ಕೊರೊನಾಗೆ ತುತ್ತಾಗಿದ್ದವರು ಮತ್ತೆ ಓಮಿಕ್ರಾನ್ ಪಾಸಿಟಿವ್ ಆದಾಗ ಅವರಿಂದ ಸೋಂಕು ಹರಡುವ ಪ್ರಮಾಣ ತೀರಾ ಕಡಿಮೆ. ಆದ್ರೆ, ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಂದ ಸೋಂಕು ಬೇಗ ಪಸರಿಸುತ್ತೆ. ಭಾರತದಲ್ಲೂ ಇದು ಸಾಧ್ಯತೆ ಇದೆ ಅಂತ ಎಚ್ಚರಿಕೆ ನೀಡಿದ್ದಾರೆ.
ವಿದೇಶದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಬಂದ 8 ಮಂದಿಗೆ ಕೊರೊನಾ ದೃಢಪಟ್ಟಿದೆ. ಕತಾರ್‌ನಿಂದ ಬಂದ ಇಬ್ಬರು, ಬ್ರಿಟನ್‍ನಿಂದ ಬಂದ 6 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಸೋಂಕಿತರನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕೊಡಗಿನ ಪೊನ್ನಂಪೇಟೆ ಶಾಲೆಯಲ್ಲಿ ಮತ್ತೆ 6 ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ. ಈ ಮಧ್ಯೆ, ಕ್ರಿಸ್‍ಮಸ್ ರಜೆ, ವರ್ಷಾಂತ್ಯದ ರಜೆಯಿಂದಾಗಿ ರಾಜ್ಯದ ಬಹುತೇಕ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿವೆ. ಮೈಸೂರಿನ ಪ್ರವಾಸಿ ಕೇಂದ್ರಗಳಾದ ಚಾಮುಂಡಿಬೆಟ್ಟ, ಅರಮನೆ, ಮೃಗಾಲಯ, ಕೆಆರ್‌ಎಸ್‌ನ ಬೃಂದಾವನ ಗಾರ್ಡನ್, ಕೊಡಗಿನ ಅಬ್ಬಿ ಫಾಲ್ಸ್, ದುಬಾರೆ ಆನೆ ಶಿಬಿರ, ಕಾವೇರಿ ನಿಸರ್ಗ ಧಾಮ, ರಾಜಾಸೀಟ್‍ನಲ್ಲಿ ಸಾವಿರಾರು ಜನ ಸೇರಿದ್ದಾರೆ. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಜನಜಾತ್ರೆ. ಹೀಗಾಗಿ, ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ.