ಸಾರಿಗೆ ನೌಕರರು ಶೇ.10 ರಷ್ಟು ವೇತನ ತೃಪ್ತಿಯಿಂದ ಸ್ವೀಕರಿಸಬೇಕು: ರಾಯರೆಡ್ಡಿ

ಮಂಗಳವಾರ, 26 ಜುಲೈ 2016 (14:21 IST)
ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ನೌಕರರು ಕೈಗೊಂಡಿರುವ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದನ್ನೂ ಸಾರಿಗೆ ನೌಕರರು ಅರಿತುಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ತಿಳಿಸಿದ್ದಾರೆ.
 
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಾರಿಗೆ ನೌಕರರ ವೇತನವನ್ನು 10 ಪ್ರತಿಶತ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ನೀಡಿದ್ದಾರೆ. ಸಾರಿಗೆ ನೌಕರರು ಇದನ್ನು ತೃಪ್ತಿಯಿಂದ ಸ್ವೀಕರಿಸಬೇಕು ಎಂದು ತಿಳಿಸಿದರು.
 
ತಮ್ಮ ಬೇಡಿಕೆಯನ್ನು ಸರಕಾರದ ಮುಂದಿಡಲು ಎಲ್ಲರಿಗೂ ಹಕ್ಕು ಇದೆ. ಆದರೆ, ಏಕಾಏಕಿ 35 ಪ್ರತಿಶತ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ತಿಳಿಸಿದರು.
 
ಸಾರಿಗೆ ನೌಕರರ ಬೇಡಿಕೆಯಂತೆ 35 ಪ್ರತಿಶತ ವೇತನ ಹೆಚ್ಚಿಸಲು ಸರಕಾರದ ಬೊಕ್ಕಸದಲ್ಲಿ ಹಣ ಇರಬೇಕಲ್ವಾ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ