ಶೇ 65.14ರಷ್ಟು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ; ಇಂದಿನಿಂದ ಮತ್ತಷ್ಟು ಚುರುಕು ಎಂದ ಡಿಸಿಎಂ

ಗುರುವಾರ, 8 ಜುಲೈ 2021 (18:41 IST)
ಬೆಂಗಳೂರು: ವಿದ್ಯಾರ್ಥಿಗಳ ಲಸಿಕೀಕರಣಕ್ಕೆ ಇಂದಿನಿಂದಲೇ ಮತ್ತಷ್ಟು ಚುರುಕು ನೀಡಲಾಗಿದೆ. ಇನ್ನು ಕೆಲ ದಿನಗಳಲ್ಲೇ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲಾಗುವುದಲ್ಲದೆ, ಇದುವರೆಗೂ ಸರಕಾರಿ- ಅನುದಾನಿತ ಪದವಿ ಕಾಲೇಜುಗಳ ಶೇ 65.14ರಷ್ಟು ವಿದ್ಯಾರ್ಥಿ- ಸಿಬ್ಬಂದಿಗೆ  ಲಸಿಕೆ ಕೊಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು. 
 
ಡಾ. ಸಿ.ಎನ್. ಅಶ್ವತ್ಥನಾರಾಯಣ ಫೌಂಡೇಷನ್ ಹಾಗೂ ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್‌ ವತಿಯಿಂದ ಮಲ್ಲೇಶ್ವರ ಕ್ಷೇತ್ರದ ಮತ್ತಿಕೆರೆಯ 3ನೇ ಮುಖ್ಯರಸ್ತೆಯಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು. 
 
ಪದವಿ ವಿದ್ಯಾರ್ಥಿಗಳಿಗೆ ಲಸಿಕೀಕರಣವನ್ನು ರಾಜ್ಯಾದ್ಯಂತ ಚುರುಕುಗೊಳಿಸಲು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರನಾಯಕ್‌ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ ಅವರು ಇಂದು ಎಲ್ಲ ಜಿಲ್ಲಾಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಸರಕಾರ ಈ ಬಗ್ಗೆ ವಿಶೇಷ ಒತ್ತು ನೀಡಿ ಆದ್ಯತಾ ಗುಂಪಿನಡಿಯಲ್ಲಿ ವಿದ್ಯಾರ್ಥಿಗಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ಕೊಡುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 
 
ಖಾಸಗಿ ಕಾಲೇಜುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ ಎಂಬ ಬಗ್ಗೆ ಅಂಕಿ-ಅಂಶ ಪಡೆದುಕೊಳ್ಳುತ್ತಿದ್ದೇವೆ. ಆ ಮಾಹಿತಿ ಸಿಕ್ಕಿದ ಕೂಡಲೇ ಉಳಿದ ಎಷ್ಟು ವಿದ್ಯಾರ್ಥಿಗಳಿಗೆ ಇನ್ನೆಷ್ಟು ದಿನದಲ್ಲಿ ಲಸಿಕೆ ನೀಡಲಾಗುವುದು ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಲಾಗುವುದು ಎಂದು ಡಿಸಿಎಂ ಹೇಳಿದರು. 
 
ವಿದ್ಯಾರ್ಥಿಗಳಿಗೆ ಲಸಿಕೆ ಅಂಕಿ-ಅಂಶ 
 
ಇದೇ ವೇಳೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು ಸರಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಈ ತಿಂಗಳ 7ರವರೆಗೆ ನೀಡಲಾಗಿರುವ ಲಸಿಕೆಯ ಅಂಶಗಳ ಮಾಹಿತಿಯನ್ನೂ ನೀಡಿದರು. 
 
ರಾಜ್ಯದ ಆರು ಶೈಕ್ಷಣಿಕ ವಲಯಗಳ ಸರಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ 4,90,799 ವಿದ್ಯಾರ್ಥಿಗಳಿದ್ದು, ಈವರೆಗೆ 3,13,898 ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್‌ ಕೊಡಲಾಗಿದ್ದು,  63.96% ಗುರಿ ತಲುಪಲಾಗಿದೆ. ಅದೇ ರೀತಿ ಒಟ್ಟು 29,241 ಸಿಬ್ಬಂದಿ ಇದ್ದು, ಈ ಪೈಕಿಗೆ 24,875 ಸಿಬ್ಬಂದಿಗೆ ಲಸಿಕೆ ನೀಡಲಾಗಿದ್ದು, 85.07% ಗುರಿ ಸಾಧಿಸಲಾಗಿದೆ. ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ 65.14% ಗುರಿ ತಲುಪಲಾಗಿದೆ ಎಂದು ಅವರು ವಿವರ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ