ಭಾನುವಾರವೂ ಕೆಲ್ಸ ಮಾಡಿ ಗಂಡ, ಹೆಂಡ್ತಿನಾ ದೂರ ಮಾಡ್ಬೇಕೂಂತಿದ್ದೀರಾ: ವಾಟಾಳ್ ನಾಗರಾಜ್

Krishnaveni K

ಸೋಮವಾರ, 13 ಜನವರಿ 2025 (13:21 IST)
ಬೆಂಗಳೂರು: 90 ಗಂಟೆ ಕೆಲಸ ಮಾಡಬೇಕು ಎಂಬ ಎಲ್&ಟಿ ಮುಖ್ಯಸ್ಥ ಸುಬ್ರಹ್ಮಣ್ಯಂ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಭಾನುವಾರವೂ ಕೆಲಸ ಮಾಡಿ ಎಂದರೆ ಗಂಡ,ಹೆಂಡತಿಯನ್ನು ದೂರ ಮಾಡಿದಂತೆ ಎಂದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ‘ಇನ್ ಫೋಸಿಸ್ ನಾರಾಯಣ ಮೂರ್ತಿ ಅವರು ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ. ಎಲ್ಲದಕ್ಕೂ ನಾರಾಯಣಮೂರ್ತಿ ಕರೀತಾರೆ, ಸುಧಾಮೂರ್ತಿ ಕರೀತಾರೆ. ಒಂದರ್ಥದಲ್ಲಿ ನಾರಾಯಣಮೂರ್ತಿಯವರನ್ನು ರಾಷ್ಟ್ರಪತಿ ಮಾಡಬೇಕು ಎನ್ನುವ ಮಟ್ಟಿಗೂ ಮಾತುಕತೆಯಾಗಿತ್ತು.

ಇದು ಒಂದು ರೀತಿ ಮೌಢ್ಯ, ಅನಾಗರಿಕತೆ, ಅಗೌರವ. ಇವರಿಗೆ ನಾವು ಕರ್ನಾಟಕ ರಾಜ್ಯದಲ್ಲಿ ಮೈಸೂರು, ಬೆಂಗಳೂರು ಕೇಳಿದ ಕಡೆ ನೂರಾರು ಕೋಟಿಯ ಜಾಗವನ್ನು ಕೊಟ್ಟಿದ್ದೇವೆ. ಇವರು ಉಪದೇಶ ಮಾಡ್ತಾರೆ, ಸಾವಿರಾರು ಕೋಟಿ ಸಂಪಾದನೆ ಮಾಡಿಬಿಟ್ಟಿದ್ದಾರೆ, ಮೊನ್ನೆ ಅವರೊಂದು ಸಣ್ಣ ಮಗು ಅದಕ್ಕೂ ಸುಮಾರು 400 ಕೋಟಿ ಅದರ ಹೆಸರಿಗೆ ಹಾಕಿದ್ದಾರೆ.

ಇದು ನಮ್ಮ ದೇಶದ ಅವಸ್ಥೆ. ಒಂದು ಕಡೆ ಅನ್ನಕ್ಕಾಗಿ ಕೂಗು, ಇನ್ನೊಂದು ಕಡೆ ಈ ದರ್ಬಾರು. ಮತ್ತು ಎಲ್&ಟಿ ಮುಖ್ಯಸ್ಥ ಸುಬ್ರಹ್ಮಣ್ಯಂ ಹೇಳ್ತಾರೆ, ನೀವು 90 ಗಂಟೆ ಕೆಲಸ ಮಾಡಬೇಕು. ನಾರಾಯಣಮೂರ್ತಿ ಹೇಳ್ತಾರೆ 70 ಗಂಟೆ ಕೆಲಸ ಮಾಡ್ತಾರೆ. ಇವರು ಮಾನವ ದ್ರೋಹಿಗಳು, ಮಾನವ ವಿರೋಧಿಗಳು.

ಒಬ್ಬ ಮನುಷ್ಯ ಈವತ್ತಿನ ತೀರ್ಮಾನದ ಪ್ರಕಾರ 48 ಗಂಟೆ ಕೆಲಸ ಮಾಡಬೇಕು ಎಂಬುದು ನಿಗದಿ. ಮನುಷ್ಯ ಯಂತ್ರವಲ್ಲ. ಮನುಷ್ಯನಿಗೆ ಹಲವು ರೋಗಗಳಿರುವಾಗ ನಾವು 70 ಗಂಟೆ ಮಾಡಿ 90 ಗಂಟೆ ಮಾಡಿ ಎನ್ನುವುದು ಮಾನವ ವಿರೋಧಿ ಕೃತ್ಯ. ಇವರಿಬ್ಬರೂ ಮೊದಲನೆಯದಾಗಿ ಇಡೀ ದೇಶದ ಜನರ ಕ್ಷಮೆ ಕೇಳಬೇಕು. ತಮ್ಮ ನೀತಿಯನ್ನು ಹಿಂದಕ್ಕೆ ಪಡೆಯಬೇಕು. ಸುಬ್ರಹ್ಮಣ್ಯಂ ಹೇಳ್ತಾರೆ ಹೆಂಡತಿಯ ಮುಖ ನೋಡಿಕೊಂಡು ಮನೆಯಲ್ಲಿ ಕುಳಿತುಕೊಳ್ಳಬೇಡಿ? ಏನು ಹಾಗಂದರೆ? ಇದು ದಬ್ಬಾಳಿಕೆಯಾಯ್ತ. ಮನೆಯಲ್ಲಿ ಸೌಂದರ್ಯ ಇರಬೇಕಾದರೆ, ಪ್ರೀತಿ, ಅಭಿಮಾನ ಇರಬೇಕಾದರೆ ಹೆಂಡತಿಯ ಜೊತೆಯಲ್ಲಿ ಸಾಮರಸ್ಯ ಇರಬೇಕು. ಹೆಂಡತಿಯನ್ನು ನಾನಾ ರೂಪದಲ್ಲಿ ನೋಡಬೇಕಾದ ಗಂಡನಿಗೆ ಇದೆ. ಅದನ್ನು ಹಂಚಿಕೊಳ್ಳಬೇಕಾದ ಅಧಿಕಾರ ಹೆಂಡತಿಗಿದೆ. ಗಂಡ,ಹೆಂಡತಿಯನ್ನು ದೂರ ಮಾಡುವ ಸುಬ್ರಹ್ಮಣ್ಯಂ ಹೇಳಿಕೆ ಮಾನವ ವಿರೋಧ ನೀತಿಗಳು. ಇವರ ನೀತಿ ಬಗ್ಗೆ ನಾವು ತೀವ್ರ ಪ್ರತಿಭಟನೆ ಮಾಡಬೇಕು. ಇವರಿಗೆ ನಾವು ಈವತ್ತು ಕಪ್ಪು ಬಾವುಟ ಪ್ರದರ್ಶಿಸಿ ನಮ್ಮ ವಿರೋಧ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ