ಕೊರೊನಾ ವೈರಸ್ ಸೋಂಕಿರುವ ರೋಗಿಗಳ ಕೋವಿಡ್ ವಾರ್ಡ್ ಗಳಲ್ಲಿ ಕದ್ದುಮುಚ್ಚಿ ಫೋಟೋ ತೆಗೆದರೆ ಅಥವಾ ವಿಡಿಯೋ ಮಾಡಿದ್ರೆ ಹುಷಾರ್.
ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿರುವ ಕೊರೊನಾ ವೈರಸ್ ಸೋಂಕಿರುವ ರೋಗಿಗಳ ಕೋವಿಡ್ ವಾರ್ಡ್, ಐಸೋಲೇಷನ್ ವಾರ್ಡ್, ಕ್ವಾರಾಂಟೈನ್ ಕೇಂದ್ರಗಳಿಗೆ ಹೊರಗಿನ ವ್ಯಕ್ತಿಗಳು ಹೋಗಿ, ವೀಡಿಯೋ ಮಾಡುವುದು, ಫೋಟೋ ತೆಗೆಯುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ಬಂದಿದ್ದು, ಇಂಥವರನ್ನು ಪ್ರೈಮರಿ ಕಾಂಟ್ಯಾಕ್ಟ್ ಆಗಿ ಕ್ವಾರಾಂಟೈನ್ ಮಾಡಬೇಕು. ಜೊತೆಗೆ ಇಂತಹವರ ವಿರುದ್ಧ ರಾಷ್ಟ್ರೀಯ ವಿಕೋಪ ನಿರ್ವಹಣೆ (ಎನ್‍ಡಿಎಂ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತರಿಗೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್ ಖಡಕ್ಕಾಗಿ ಹೇಳಿದ್ದಾರೆ.
ಕಲಬುರಗಿ ನಗರ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮಾತನಾಡಿ, ಈಗಾಗಲೇ ವ್ಯಕ್ತಿಯೊಬ್ಬರ ಮಾಹಿತಿ ಪಡೆದಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಅಕ್ರಮವಾಗಿ ಪ್ರವೇಶಿಸಿದವರ ಬಗ್ಗೆ ಆಸ್ಪತ್ರೆ ನಿರ್ದೇಶಕರು ಮಾಹಿತಿ ನೀಡಿದಲ್ಲಿ, ಬಂಧನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.