ಬೆಂಗಳೂರು: ಡ್ರೈವರಣ್ಣಾ ಸ್ವಲ್ಪ ತಡ ಆದ್ರೂ ಪರವಾಗಿಲ್ಲ. ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳನ್ನು ಕಂಡರೆ ತಕ್ಷಣವೇ ಬಸ್ ನಿಲ್ಲಿಸಿ ಹತ್ತಿಸಿಕೊಳ್ಳಿ ಎಂದು ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕ ತನ್ನ ಚಾಲಕನಿಗೆ ಮನವಿ ಮಾಡಿರುವ ಈ ದೃಶ್ಯ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಕರ್ನಾಟಕದಲ್ಲಿ ಇದೀಗ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದೆ. ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಾರ್ವಜನಿಕ ಸಾರಿಗೆಗಳನ್ನೇ ಅವಲಂಬಿಸುತ್ತಾರೆ. ಇಂತಹವರಿಗೆ ತೊಂದರೆಯಾಗಬಾರದು ಎಂದು ಈ ನಿರ್ವಾಹಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.
ಕೆಎಸ್ ಆರ್ ಟಿಸಿ ಬಸ್ ಒಂದರ ನಿರ್ವಾಹಕ ಬಸ್ ಹೊರಡುವ ಮೊದಲು ಚಾಲಕರಿಗೆ ಡ್ರೈವರ್ ಸಾಹೇಬ್ರೇ.. ಈ ತಿಂಗಳು 18 ನೇ ತಾರೀಖಿನಿಂದ ಎಸ್ಎಸ್ಎಲ್ ಸಿ ಮಕ್ಕಳಿಗೆ ಪರೀಕ್ಷೆ ಶುರುವಾಗುತ್ತದೆ. ದಯವಿಟ್ಟು ಪರೀಕ್ಷೆಗೆ ಹೋಗುವ ಮಕ್ಕಳು ಎಲ್ಲೇ ಕೈ ತೋರಿಸಿ ನಿಲ್ಲಿಸಲು ಹೇಳಿದ್ರೂ ನಿಲ್ಲಿಸಿ ಹತ್ತಿಸಿಕೊಳ್ಳಿ. ನಾವು ಡ್ಯೂಟಿಗೆ ಹೋಗೋದು 10 ನಿಮಿಷ ಲೇಟ್ ಆದ್ರೂ ಪರವಾಗಿಲ್ಲ. ಪರೀಕ್ಷೆಗೆ ಹೋಗುವ ಮಕ್ಕಳಿಗೆ ಹೆಲ್ಪ್ ಆಗಲಿ. ಮಕ್ಕಳು ಧೈರ್ಯವಾಗಿ ಹೋಗಿ ಎಕ್ಸಾಂ ಬರೆಯಲಿ. ನಮ್ಮ ಸಾರಿಗೆ ವ್ಯವಸ್ಥೆ ಉಪಯೋಗವಾಗಲಿ. ಸಂಸ್ಥೆ ಬಗ್ಗೆ ಇರುವ ಗೌರವ ಇನ್ನಷ್ಟು ಹೆಚ್ಚಾಗಲಿ ಎಂದು ಚಾಲಕನಿಗೆ ನಿರ್ವಾಹಕ ನಿರ್ದೇಶನ ನೀಡಿದ್ದಾರೆ.
ಅಷ್ಟೇ ಅಲ್ಲ, ಇದೇ ಥರಾ ನಮ್ಮ ಹಾಗೆ ಡ್ಯೂಟಿ ಮಾಡುವ ಕಂಡಕ್ಟರ್, ಚಾಲಕರು ಯಾರೇ ಇದ್ರೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಎಲ್ಲೇ ಕಂಡರೂ ಹತ್ತಿಸಿ ಪರೀಕ್ಷಾ ಕೇಂದ್ರದ ಹತ್ತಿರ ಬಿಡಿ ಎಂದು ಮನವಿ ಮಾಡಿದ್ದಾರೆ. ಅವರ ಈ ಸಾಮಾಜಿಕ ಕಳಕಳಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.