ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅಷ್ಟೇ ಅಲ್ಲ. ಅನೇಕರ ಸೋಲಿಗೆ ವಿಜಯೇಂದ್ರ ಹುನ್ನಾರ ನಡೆಸಿದ್ದರು . ಅವರಿಂದ ನಮ್ಮ ಸಮಾಜಕ್ಕೆ ಮೀಸಲಾತಿ ಹಾಗೂ ನ್ಯಾಯ ಸಿಗುವುದಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಈ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕಾಂಗ ಸಭೆ ಬಗ್ಗೆ ನನಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಉತ್ತರ ಕರ್ನಾಟಕ ಭಾಗದವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ನಾಯಕ ಹುದ್ದೆ ಸಿಗುವವರೆಗೂ ನಾನು ಯಾವುದೇ ಸಭೆಗೆ ಹೋಗಲ್ಲ ಎಂದು ಮತ್ತೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ರೊಚ್ಚಿಗೆದ್ದಿದ್ದಾರೆ. ಅದರಲ್ಲೂ ಕರ್ನಾಟಕ ಬಿಜೆಪಿಯಲ್ಲಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾದ ಬಳಿಕ, ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದರು. ಈಗ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.