ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್‌ ಕಾರ್ಡ್‌ ಬ್ಲಾಕ್‌ – ATMಗಳ ಮುಂದೆ ರಷ್ಯನ್ನರ ದಂಡು

ಬುಧವಾರ, 2 ಮಾರ್ಚ್ 2022 (21:02 IST)
ಯುಎಸ್‌ ಪಾವತಿ ಕಾರ್ಡ್‌ ಸಂಸ್ಥೆಗಳಾದ ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ ತಮ್ಮ ನೆಟ್‌ವರ್ಕ್‌ನಿಂದ ರಷ್ಯಾದ ಹಣಕಾಸು ಸಂಸ್ಥೆಗಳನ್ನು ನಿರ್ಬಂಧಿಸಿವೆ. ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣಕ್ಕೆ ವಿರೋಧ ವ್ಯಕ್ತಪಡಿಸಿರುವ ಅಮೆರಿಕ ಹಲವು ನಿರ್ಬಂಧಗಳನ್ನು ವಿಧಿಸುತ್ತಿದೆ.
ಸೋಮವಾರದಿಂದಲೇ ಈ ನಿರ್ಬಂಧ ಅನ್ವಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಮಾನವೀಯ ಸಹಾಯಕ್ಕಾಗಿ 15.14 ಕೋಟಿ (2 ಮಿಲಿಯನ್‌ ಡಾಲರ್)‌ ದೇಣಿಗೆ ನೀಡುವುದಾಗಿ ವೀಸಾ ಸ್ಪಷ್ಟಪಡಿಸಿದೆ. ಮಾಸ್ಟರ್‌ ಕಾರ್ಡ್‌ ಕೂಡ 15.14 ಕೋಟಿ ರೂ. ಕೊಡುಗೆ ನೀಡುವುದಾಗಿ ತಿಳಿಸಿದೆ.
ಸರ್ಕಾರದ ನಿರ್ಬಂಧಗಳ ಪ್ರಕಾರ ವಿಶೇಷವಾಗಿ ಗೊತ್ತುಪಡಿಸಿದ ರಾಷ್ಟ್ರದ್ದು ಎಂದು ಪಟ್ಟಿ ಮಾಡಲಾದ ಘಟಗಳಿಗೆ ವೀಸಾ ತನ್ನ ನೆಟ್‌ವರ್ಕ್‌ಗೆ ಪ್ರವೇಶವನ್ನು ಅಮಾನತುಗೊಳಿಸಿದೆ. ರಷ್ಯಾದ ಕೇಂದ್ರ ಬ್ಯಾಂಕ್‌ ಮತ್ತು ಎರಡನೇ ಅತಿ ದೊಡ್ಡ ಸಾಲದಾತ ವಿಟಿಬಿ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಯುಎಸ್‌, ಬ್ರಿಟನ್‌, ಯೂರೋಪ್‌ ಮತ್ತು ಕೆನಡಾ ದೇಶಗಳು ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ಶನಿವಾರವೂ ಘೋಷಿಸಿವೆ.
ಹಲವು ನಿರ್ಬಂಧಗಳ ಹಿನ್ನೆಲೆಯಲ್ಲಿ ಬ್ಯಾಂಕ್‌ ಕಾರ್ಡ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು, ಬ್ಯಾಂಕ್‌ಗಳು ನಗದು ಹಿಂಪಡೆಯುವಿಕೆಯನ್ನು ಮಿತಿಗೊಳಿಸಬಹುದು ಎಂದು ಆತಂಕದಲ್ಲಿ ರಷ್ಯನ್ನರು ಎಟಿಎಂಗಳ ಮುಂದೆ ಅಪಾರ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ಭಾನುವಾರ ಮತ್ತು ಸೋಮವಾರ ಎಟಿಎಂಗಳ ಮುಂದೆ ರಷ್ಯನ್ನರ ಉದ್ದದ ಕ್ಯೂ ಇದ್ದ ದೃಶ್ಯಗಳು ಕಂಡುಬಂದಿದ್ದವು.
ರಷ್ಯಾ ಕಳೆದ ವಾರ ಉಕ್ರೇನ್‌ ಮೇಲೆ ಯುದ್ಧವನ್ನು ಸಾರಿತು. ಇದಕ್ಕೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಅನೇಕ ಪಾಶ್ಚಿಮಾತ್ಯ ಬ್ಯಾಂಕ್‌ಗಳು, ವಿಮಾನಯಾನ ಸಂಸ್ಥೆಗಳು ರಷ್ಯಾದೊಂದಿಗೆ ಸಂಬಂಧವನ್ನು ಕಡಿತಗೊಳಿಸಿವೆ. ರಷ್ಯಾದ ಕ್ರಮಗಳು ಸ್ವೀಕಾರಾರ್ಹವಲ್ಲ ಎಂದು ವಿರೋಧಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ