ಕರ್ನಾಟಕ ಅಸೋಸಿಯೇಷನ್ ಫಾರ್ ರೆಸಿಡೆಂಟ್ ಡಾಕ್ಟರ್ಸ್ ಈ ಕುರಿತು ಒಂದು ಪಟ್ಟಿಯನ್ನು ನೀಡಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ 16 ಆಸ್ಪತ್ರೆಗಳು ಮತ್ತು ಆರೋಗ್ಯ ಇಲಾಖೆ ಅಡಿಯಲ್ಲಿ ಬರುವ 53 ಆಸ್ಪತ್ರೆಗಳ ವೈದ್ಯರಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡಿಲ್ಲ. ಇವರು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಒಂದು ವಾರದ ಒಳಗೆ ವೇತನವನ್ನು ನೀಡುವುದಾಗಿ ಹೇಳಿಕೆ ನೀಡಿದ್ದರೂ ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಡಾ. ವಿಶ್ವನಾಥ್ ಆರೋಪಿಸಿದರು.
ಬೆಂಗಳೂರಿನ ರಾಜ್ಯ ಕಚೇರಿಯಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಯನಗರ ಅಸೆಂಬ್ಲಿಯ ಅಧ್ಯಕ್ಷ ಮಂಜುನಾಥ್ ಆರ್ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಸೇವೆ ಮಾಡಿ ಮಡಿದ ವೈದ್ಯರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡುತ್ತಿದೆ. ಕರ್ನಾಟಕ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರಿಗೆ ಪಿಪಿಇ ಕಿಟ್ ಕೂಡ ನೀಡಿರಲಿಲ್ಲ. ಅಲ್ಲದೇ ವೇತನವನ್ನೇ ನೀಡದೆ ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದೆ ಟೀಕಿಸಿದರು.
ಆಸ್ಪತ್ರೆಗಳಲ್ಲಿ ವೈದ್ಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ರೋಗಿಗಳು, ಅವರ ಕುಟುಂಬಸ್ಥರು, ಸ್ಥಳೀಯ ರಾಜಕೀಯ ನಾಯಕರು ವೈದ್ಯರ ಮೇಲೆ ಕೆಲಸದ ಸಮಯದಲ್ಲಿ ನಡೆಸುತ್ತಿರುವ ಹಲ್ಲೆಗಳು ವರದಿಯಾಗುತ್ತಿವೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರಕಾರ 70% ವೈದ್ಯರು ಈ ಸಮಸ್ಯೆಗಳನ್ನು ಎದುರಿಸುತ್ತಾರೆ. ವೈದ್ಯರಿಗೆ ಗೌರವಯುತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡುವುದೇ ಅವರಿಗೆ ವೈದ್ಯರ ದಿನದಂದು ನೀಡುವ ಗೌರವ ಎಂದು ಕೆ ಆರ್ ಪುರಂ ನ ಆಮ್ ಆದ್ಮಿ ಪಾರ್ಟಿಯ ಉಸ್ತುವಾರಿ ಡಾ. ಕೇಶವ್ ಅಭಿಪ್ರಾಯ ಪಟ್ಟರು.
ಕರ್ನಾಟಕ ಸರಕಾರ ಕೊರೋನ ಸಂದರ್ಭದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಮಾಡುತ್ತಿರುವ ವೈದ್ಯರಿಗೆ ತಕ್ಷಣ ವೇತನವನ್ನು ನೀಡಬೇಕು. ದೆಹಲಿ ಸರಕಾರ ನೀಡುವಂತೆ ಕರ್ನಾಟಕದಲ್ಲಿ ಕೊರೋನ ಸೇವೆಯಲ್ಲಿ ಮಾಡಿದ ವೈದ್ಯರಿಗೆ ಪರಿಹಾರ ನೀಡಿ. ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.