ನಾವಿಂದು ಬಹಳ ಪುಣ್ಯದ ವರ್ಷದಲ್ಲಿದ್ದೇವೆ: ಡಿಸಿಎಂ ಡಿಕೆ ಶಿವಕುಮಾರ್

Sampriya

ಬುಧವಾರ, 2 ಅಕ್ಟೋಬರ್ 2024 (19:12 IST)
ಬೆಂಗಳೂರು: ನಾವಿಂದು ಬಹಳ ಪುಣ್ಯದ ವರ್ಷದಲ್ಲಿದ್ದೇವೆ. ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ಬೆಳಗಾವಿ ಅಧಿವೇಶನಕ್ಕೆ ಈಗ ಶತಮಾನ ತುಂಬಿದೆ. ಈ ಸಂದರ್ಭವನ್ನು ನಾವು ಬಳಸಿಕೊಂಡು ಗಾಂಧೀಜಿ ಅವರು ಹಾಕಿಕೊಟ್ಟ ದಾರಿ ಹಾಗೂ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಭಾರತ ಜೋಡೋ ಭವನದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ. ಈ ದೇಶಕ್ಕೆ ಕಾಂಗ್ರೆಸ್ ಹಾಕಿಕೊಟ್ಟಿರುವ ಬುನಾದಿ, ಗಾಂಧಿ ಅವರ ತತ್ವ, ಆದರ್ಶವೇ ನಮ್ಮ ಆಸ್ತಿ. ಈ ಸಂದರ್ಭದಲ್ಲಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಈಗ ಎಐಸಿಸಿ ಅಧ್ಯಕ್ಷರಾಗಿರುವುದು ಬಹಳ ವಿಶೇಷ. ಡಿಸೆಂಬರ್ ಕೊನೆ ವಾರದಲ್ಲಿ ಬೆಳಗಾವಿಯಲ್ಲಿ ವಿಶೇಷವಾದ ಎಐಸಿಸಿ ಅಧಿವೇಶನ ಮಾಡಲಿದ್ದು, ಇದಕ್ಕೆ ಎಐಸಿಸಿ ನಾಯಕರನ್ನು ಆಹ್ವಾನಿಸುತ್ತೇನೆ. ಈ ವಿಚಾರವಾಗಿ ಪಕ್ಷದ ಹಿರಿಯ ನಾಯಕರ ಸಮಿತಿ ಮಾಡಿದ್ದೇನೆ.

ಇಂದು ಗಾಂಧಿ ನಡಿಗೆ ಮೂಲಕ ಹೆಜ್ಜೆ ಇಟ್ಟಿದ್ದೇವೆ. ಹಿಂದೆ ದೇಶಪಾಂಡೆ ಅವರು ಅಧ್ಯಕ್ಷರಾಗಿದ್ದಾಗ ದಂಡಿ ಮಾರ್ಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಅದರ ನೆನಪಿನ ಆಧಾರದ ಮೇಲೆ ಇಂದು ಪಕ್ಷ ಹಾಗೂ ಸರ್ಕಾರದ ವತಿಯಿಂದ ಈ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. 200 ವರ್ಷದ ಹಿಂದೆ ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಅವರು ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಕಿತ್ತೂರಿನಲ್ಲಿ ವಿಶೇಷ ಕಾರ್ಯಕ್ರಮ ಮಾಡಲು ಆ ಜಿಲ್ಲೆಯ ನಾಯಕರು ನಿರ್ಧರಿಸಿದ್ದು, ಅದಕ್ಕೆ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಇಂದು ಚಾಲನೆ ಮಾಡಿದ್ದಾರೆ.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ನಾವು ನೀವೆಲ್ಲರೂ ಗಾಂಧಿ ಕುಟುಂಬದ ಸದಸ್ಯರು. ನಮ್ಮ ಮೇಲೆ ರಾಷ್ಟ್ರಧ್ವಜವಿದೆ. ಈ ಅವಕಾಶ ಬೇರೆ ಯಾರಿಗೂ ಸಿಗುವುದಿಲ್ಲ. ನಾವಿಂದು ಮಾಡಲು ಹೊರಟಿರುವ ಕೆಲಸ ಒಬ್ಬರಿಂದ ಮಾಡಲು ಸಾಧ್ಯವಿಲ್ಲ. ನಿಮ್ಮೆಲ್ಲರ ಸಹಕಾರ ಮುಖ್ಯ. ಇಂದಿನಿಂದ ಮತ್ತೆ ನೀವೆಲ್ಲರೂ 2028ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಉತ್ಸಾಹದಿಂದ ಪ್ರತಿಜ್ಞೆ ಮಾಡಬೇಕು.

ನಾನು ಹಾಗೂ ಸಿದ್ದರಾಮಯ್ಯ ಅವರು ಬೆಳಗಾವಿಯ ಗಾಂಧಿ ಬಾವಿಯಿಂದ ನಮ್ಮ ಚುನಾವಣಾ ಪ್ರಚಾರ ಆರಂಭಿಸಿ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆವು.     

ಮುಖ್ಯಮಂತ್ರಿಗಳು ಹೇಳಿರುವ ಒಂದು ಮಾತನ್ನು ನಾನಿಂದು ಹೇಳಬಯಸುತ್ತೇನೆ. ನಮ್ಮ ಎಲ್ಲಾ ನ್ಯಾಯಾಲಗಳ ಜತೆಗೆ ನಮ್ಮ ಮನದಲ್ಲಿ ಒಂದು ದೊಡ್ಡ ನ್ಯಾಯಾಲಯವಿದೆ. ಅದೇ ಆತ್ಮಶಕ್ತಿಯ ನ್ಯಾಯಾಲಯ. ಈ ನ್ಯಾಯಾಲಯದಂತೆ ನಾವು ನಡೆಯಬೇಕು.

ನಾವು ಭಾವನೆ ಮೇಲೆ ರಾಜಕಾಕರಣ ಮಾಡುತ್ತಿಲ್ಲ. ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತಿದ್ದೇವೆ. ಜನರ ಬದುಕು ಸುಧಾರಿಸಲು ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ದುಡಿಮೆಯ ನಂಬಿ ಬದುಕು. ಅದರಲ್ಲೇ ದೇವರನ್ನೇ ಹುಡುಕು ಎಂದು ಗಾಂಧೀಜಿಯವರು ಹೇಳಿದ್ದಾರೆ. ಗಾಂಧಿ ಜಯಂತಿಯಂದು ನಾವು ಅನೇಕ ಕಾರ್ಯಕ್ರಮ ರೂಪಿಸಿದ್ದು, ಮುಂದಿನ ಒಂದು ವರ್ಷಗಳ ಈ ಕಾರ್ಯಕ್ರಮ ರೂಪಿಸಲಾಗುವುದು. ಗಾಂಧೀಜಿ ಅವರ ತತ್ವ, ಆದರ್ಶ, ಮಾರ್ಗದರ್ಶನವನ್ನು ಕಾಂಗ್ರೆಸಿಗರು ಅಳವಡಿಸಿಕೊಳ್ಳಬೇಕು. ಒಂದು ಊರಿಗೆ ಒಂದು ಪಂಚಾಯ್ತಿ ಇರಬೇಕು, ಒಂದು ಶಾಲೆ ಹಾಗೂ ಒಂದು ಸಹಕಾರ ಸಂಘ ಇರಬೇಕು ಎಂದು ಹೇಳಿದ್ದರು. ಅದರಂತೆ ನಮ್ಮ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮ ಪಂಚಾಯ್ತಿಗೆ ಬಂಧಿಸಿದಂತೆ ವಿವಿಯನ್ನೇ ಸ್ಥಾಪಿಸಲಾಗಿದೆ. ಸಬರಮತಿ ಆಶ್ರಮದ ಪ್ರತಿರೂಪವನ್ನೇ ಇಲ್ಲಿ ನಿರ್ಮಾಣ ಮಾಡಿದ್ದಾರೆ. ಇದೊಂದು ಪ್ರವಾಸಿ ತಾಣವಾಗಿದೆ.

ಗಾಂಧಿಯವರ ಹೆಸರು ಹೇಗೆ ಶಾಶ್ವತವಾಗಿರುತ್ತದೆಯೋ, ಅದೇ ರೀತಿ ಕಾಂಗ್ರೆಸ್ ಪಕ್ಷ ಶಾಶ್ವತವಾಗಿರುತ್ತದೆ. ಕಾಂಗ್ರೆಸ್ ಪಕ್ಷವನ್ನು ಅಂತ್ಯಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ