ನಾವೇ ಬಲಿಪಶುಗಳು, ಆದರೆ ವಿಲನ್‌ಗಳಂತೆ ನೋಡಲಾಗುತ್ತಿದೆ: ಸಿಎಂ

ಭಾನುವಾರ, 2 ಅಕ್ಟೋಬರ್ 2016 (13:06 IST)
ಕಾವೇರಿ ವಿಷಯದಲ್ಲಿ ನಾವು ಬಲಿಪಶುಗಳಾಗಿದ್ದೇವೆ. ಆದರೂ ನಮ್ಮನ್ನು ವಿಲನ್‌ಗಳಂತೆ ನೋಡಲಾಗುತ್ತಿದೆ. ನಾವು ಗಾಂಧಿ ಮಾರ್ಗದಲ್ಲಿ ಹೋರಾಡಿ ಗೆಲ್ಲೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಬೆಂಗಳೂರಿನ ಗಾಂಧೀ ಭವನದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ಅವರು, ಕೃಷ್ಣರಾಜಸಾಗರದಲ್ಲಿ ಆಣೆಕಟ್ಟು ಕಟ್ಟಿದವರು ನಾವು. ಅದನ್ನು ಕಟ್ಟಲು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗೆ ಗೊತ್ತು. ಮೈಸೂರು ಮಹಾರಾಜರು ಚಿನ್ನ ಅಡವಿಟ್ಟು ಆಣೆಕಟ್ಟು ಕಟ್ಟಿಸಿದ್ದರು. ಆದರೆ ಈಗ ನಮ್ಮ ಜಲಾಶಯದಲ್ಲಿನ ನೀರನ್ನು ನಮಗೆ ಬಳಸಲಾಗುತ್ತಿಲ್ಲ. ನಮ್ಮ ರೈತರಿಗೆ ನೀರು ಸಿಗುತ್ತಿಲ್ಲ ಎಂದು ಸಿಎಂ ಹತಾಶರಾಗಿ ನುಡಿದಿದ್ದಾರೆ. 
 
ಡ್ಯಾಂ ಕಟ್ಟಲು ಕೇಂದ್ರ ಸರ್ಕಾರ ಒಂದು ನಯಾ ಪೈಸೆ ನೀಡಿಲ್ಲ. ಆದ್ರೂ ನೀರು ಬಿಡಿ, ನೀರು ಬಿಡಿ ಎಂದು ಸುಪ್ರೀಂಕೋರ್ಟ್ ಪದೇ ಪದೇ ಆದೇಶ ನೀಡುತ್ತಿದೆ. ಕುಡಿಯಲು ನೀರಿಲ್ಲ ಅಂದರೆ, ಅದೆಲ್ಲ ಗೊತ್ತಿಲ್ಲ ಮೊದಲು ನೀರು ಬಿಡಿ ಎನ್ನುತ್ತಾರೆ. ನಮ್ಮ ಪರಿಸ್ಥಿತಿ ಸುಪ್ರೀಂಗೆ ಅರ್ಥವೇ ಆಗುತ್ತಿಲ್ಲ. ಇದು ದೊಡ್ಡ ದುರಂತವೇ ಸರಿ. ಈಗಾಗಲೇ ತಮಿಳುನಾಡಿಗೆ 53 ಟಿಎಂಸಿ ನೀರನ್ನು ಹರಿಯ ಬಿಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಬೇಸರದಿಂದ ನುಡಿದಿದ್ದಾರೆ.
 
ಸುಪ್ರೀಂಕೋರ್ಟ್ ಬಗ್ಗೆ ನಮಗೆ ಅಪಾರ ಗೌರವವಿದೆ . ಆದರೆ ಅನಾನುಕೂಲತೆಯಿಂದ ಅದರ ಆದೇಶವನ್ನು ಪಾಲಿಸಲಾಗುತ್ತಿಲ್ಲ. ಹೀಗಾಗಿ ನಮ್ಮ ಹೋರಾಟ ಅಹಿಂಸಾ ಮಾರ್ಗದಲ್ಲಿರಲಿ. ಗಾಂಧಿಮಾರ್ಗದಲ್ಲಿ ಹೋರಾಟ ಮಾಡೋಣ ಎಂದು ಸಿಎಂ ಹೇಳಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ