ತೆರೆದ ತೋಳುಗಳಿಂದ ನವೋದ್ಯಮಿಗಳನ್ನು ಸ್ವಾಗತಿಸುತ್ತದೆ ಕರ್ನಾಟಕ: ಸಿಎಂ ಬೊಮ್ಮಾಯಿ

ಶುಕ್ರವಾರ, 19 ನವೆಂಬರ್ 2021 (20:05 IST)
ಬೆಂಗಳೂರು: ಕರ್ನಾಟಕ ಮತ್ತು ಬೆಂಗಳೂರಿನ ಪ್ರಾಕೃತಿಕ ವ್ಯವಸ್ಥೆಯು ಮಾನವ ಮಿದುಳಿನ ಹೆಚ್ಚು ಬಳಕೆಗೆ ಪೂರಕವಾಗಿದೆ. ಎಲ್ಲ ನವೋದ್ಯಮಿಗಳನ್ನು ತೆರೆದ ತೋಳುಗಳಿಂದ ಮತ್ತು ಹೃದಯದಿಂದ ಸ್ವಾಗತಿಸುತ್ತೇನೆ. ಬನ್ನಿ, ಭಾಗವಹಿಸಿ, ಆವಿಷ್ಕರಿಸಿ ಮತ್ತು ಸಾಧಕರಾಗಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗ-2021ರಲ್ಲಿ ಭಾಗವಹಿಸಿದ ಅವರು, ಯಶಸ್ಸು ಚಿಕ್ಕದು, ಸಾಧನೆಯೇ ಗುರಿ. ಯಶಸ್ಸು ಎಂಬುದು ಸಾಧನೆಯ ಒಂದು ಭಾಗವಷ್ಟೇ. ಅದು ಮನುಷ್ಯನ ಜೀವನ ಶೈಲಿಯನ್ನು ಉನ್ನತೀಕರಿಸುತ್ತದೆ. ಮಾನವೀಯತೆಯಿಂದ ಮುನ್ನಡೆದು ಎಲ್ಲ ಯಶಸ್ವಿ ವ್ಯಕ್ತಿಗಳು ಸಾಧಕರಾಗಬೇಕೆಂದು ಹೇಳಿದರು.
ಬಿಟಿಎಸ್-2021ರಲ್ಲಿ ಭಾಗವಹಿಸುತ್ತಿರುವ ನಾನು, ಬಾಹ್ಯಾಕಾಶ ನೌಕೆಯಲ್ಲಿದ್ದೇನೆ ಎಂದು ನನಗೆ ಅನಿಸುತ್ತದೆ. ಇದು ನಮ್ಮನ್ನು ಉತ್ತಮ ಭವಿಷ್ಯದತ್ತ ಸಾಗಿಸುತ್ತದೆ. ಇಂದಿನ ಜಗತ್ತಿನಲ್ಲಿ ಆಕಾಶವು ಮಿತಿಯಲ್ಲ. ಜಗತ್ತು ಆಕಾಶವನ್ನೂ ಮೀರಿ ಯೋಚಿಸುತ್ತಿದೆ. ಸಾಧ್ಯತೆಗಳಿಗೆ ಮಿತಿಯಿಲ್ಲ. ಸೃಷ್ಟಿಕರ್ತ ನಮಗೆ ಬುದ್ಧಿಶಕ್ತಿ, ಅದನ್ನು ಪ್ರಕಟಿಸುವ ಶಕ್ತಿ, ಸ್ವಾತಂತ್ರ್ಯ ಮತ್ತು ಬೆಳಕು ಹಾಗೂ ಶಬ್ದದ ವೇಗದಲ್ಲಿ ಓಡುವ ಸಾಮರ್ಥ್ಯವನ್ನೂ ನೀಡಿದ್ದಾನೆ. ಜಗತ್ತಿನಲ್ಲಿ ಹೆಚ್ಚಿನ ಆವಿಷ್ಕಾರಗಳು ಯಾವುದೇ ಸಂಸ್ಥೆ ಅಥವಾ ದೇಶದಿಂದ ನಡೆದಿಲ್ಲ. ಪೆನ್ಸುಲಿನ್, ಕಂಪ್ಯೂಟರ್ ಇತ್ಯಾದಿ ಆವಿಷ್ಕಾರಗಳು ಒಬ್ಬ ವ್ಯಕ್ತಿಯಿಂದ ಆರಂಭವಾಗಿತ್ತು ಎಂದರು.
ಸರ್ವೆಯೊಂದರ ಪ್ರಕಾರ, ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಮಿದುಳಿನ ಶೇ. 6-7ರಷ್ಟು ಮಾತ್ರ ಬಳಕೆ ಮಾಡುತ್ತಾನೆ. ಅಧಿಕ ಐಕ್ಯೂ ಹೊಂದಿರುವ ವ್ಯಕ್ತಿ ಶೇ. 8-10ರಷ್ಟು ಮತ್ತು ವೈಜ್ಞಾನಿಕ ಯೋಚನೆಯ ಹಿನ್ನೆಲೆಯುಳ್ಳವ ಶೇ. 15-20ರಷ್ಟು ಮಿದುಳನ್ನು ಬಳಸುತ್ತಾನೆ. ಅಂದರೆ ಮನುಷ್ಯರು ತಮ್ಮ ಮಿದುಳನ್ನು ಗರಿಷ್ಠ ಶೇ. 20ರಷ್ಟು ಮಾತ್ರ ಬಳಕೆ ಮಾಡುತ್ತಾರೆ. ಮನುಷ್ಯನ ಮಿದುಳಿನ ಶಕ್ತಿಯನ್ನು ಗುರುತಿಸಿ, ಗೌರವಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕ ಹಂಸದಂತೆ ಹಾರಾಡಬೇಕು
ಇತರ ರಾಜ್ಯಗಳು ಹೆಮ್ಮೆ ಪಡುವಂತೆ ಕರ್ನಾಟಕವು ಶ್ರೀಮಂತ ಆವಿಷ್ಕಾರ, ಉನ್ನತ ಚಿಂತನೆಯ, ನುರಿತ ನಾಯಕತ್ವವನ್ನು ಹೊಂದಿದೆ. ಇಡೀ ದೇಶವೇ ಕರ್ನಾಟಕದ ಬಗ್ಗೆ ತಿಳಿದುಕೊಂಡಿದೆ. ನಮ್ಮಲ್ಲಿ ಪ್ರತಿಭಾನ್ವಿತ, ಉನ್ನತ ಕೌಶಲ ಹೊಂದಿರುವ ಮಾನವ ಸಂಪನ್ಮೂಲವಿದೆ. ಅದೇ ರೀತಿ ಅಂತಾರಾಷ್ಟ್ರೀಯ ಮಟ್ಟದ ನೂರಾರು ಸಂಸ್ಥೆಗಳು ನಮ್ಮಲ್ಲಿವೆ. ಬಾಹ್ಯಾಕಾಶ, ಅಂತರಿಕ್ಷ, ರಕ್ಷಣಾ ತಾಂತ್ರಿಕತೆ, ಐಟಿಬಿಟಿ, ಕೃತಕ ಬುದ್ಧಿಮತ್ತೆ… ಹೀಗೆ ಎಲ್ಲವೂ ನಮ್ಮಲ್ಲಿದೆ. ಜಗತ್ತಿನ ನಾನಾ ಕಡೆಗಳಲ್ಲಿರುವವರು ನಮ್ಮೊಂದಿಗೆ ಕೈ ಜೋಡಿಸಿ, ಕರ್ನಾಟಕವು ಸರಸ್ವತಿಯ ವಾಹನ ಹಂಸದಂತೆ ಆಕಾಶದಲ್ಲಿ ಇನ್ನಷ್ಟು ಎತ್ತರದಲ್ಲಿ ಹಾರಾಡುವಂತೆ ಮಾಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಆಶಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ