ಲಾಕ್ ಡೌನ್ ನಿಂದ ತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿದ್ದ ಕಾರ್ಮಿಕರಿಗೆ ಸಚಿವರೊಬ್ಬರು ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಲಾಕ್‌ಡೌನ್‌ನಿಂದ ತಮ್ಮ ಊರಿಗೆ ತೆರಳಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದ ಸುಮಾರು 70 ಕೂಲಿ ಕಾರ್ಮಿಕರಿಗೆ ವಿಶೇಷ ಬಸ್ ಮೂಲಕ ತಮ್ಮ ಗ್ರಾಮಕ್ಕೆ ತೆರಳಲು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಮುಂಡಗೋಡ ತಾಲೂಕಿನ ಮೈನಳ್ಳಿ ಹಾಗೂ ತೇಗಿನಕೊಪ್ಪ ಗ್ರಾಮದ ಸುಮಾರು 70 ಕೂಲಿಕಾರ್ಮಿಕರು ಹೊನ್ನಾವರ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಕೂಲಿ ಕೆಲಸಕ್ಕಾಗಿ ತೆರಳಿದ್ದರು. ಆದರೆ ಲಾಕ್ ಡೌನ್ ದಿಂದ ಊರಿಗೆ ಬರುವುದಕ್ಕೆ ಆಗದೆ ಅಲ್ಲಿಯೇ ಅತಂತ್ರರಾಗಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಸಚಿವ ಹೆಬ್ಬಾರ್, ಕೂಲಿ ಕಾರ್ಮಿಕರಿಗೆ ಹೊನ್ನಾವರದಿಂದ ಮುಂಡಗೋಡಕ್ಕೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿ ಅವರು ತಮ್ಮ ಗ್ರಾಮಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರು.