ಆ ಹಳ್ಳಿಗೆ ಭೇಟಿ ನೀಡಿದ ಡಿಸಿ ಹೇಳಿದ್ದೇನು?

ಶುಕ್ರವಾರ, 31 ಮೇ 2019 (18:33 IST)
ಮದುವೆ ಮೆರವಣಿಗೆ ಸಂದರ್ಭದಲ್ಲಿ ಸವರ್ಣಿಯರ-ಪರಿಶಿಷ್ಟ ಜಾತಿ ಸಮುದಾಯದವರ ಮಧ್ಯೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಡಿಸಿ ಇಂದು ಆ ಗ್ರಾಮಕ್ಕೆ ಭೇಟಿ ನೀಡಿದ್ರು.

ಆಕಸ್ಮಿಕವಾಗಿ ಯಾವುದೋ ಅಚಾತುರ್ಯದಿಂದ ನಡೆದ ಘಟನೆಯನ್ನು ಪ್ರತಿಷ್ಠೆಯಾಗಿ ಮಾಡಿಕೊಂಡು ಸಮುದಾಯಗಳು ಪರಸ್ಪರ ಘರ್ಷಣೆ ಮಾಡುವುದು ಸರಿಯಲ್ಲ. ಆಗಿದ್ದು ಕೆಟ್ಟ ಗಳಿಗೆ ಎಂದು ಮರೆತು ಗ್ರಾಮದಲ್ಲಿ ಎಂದಿನಂತೆ ಎಲ್ಲ ಸಮುದಾಯದವರು ಪರಸ್ಪರ ಸಹೋದರತ್ವದಿಂದ ಜೀವನ ನಡೆಸುವ ಮೂಲಕ ಶಾಂತಿ ನೆಲೆಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ನಾಗರಹಳ್ಳಿ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಕಳೆದ ವಾರ ಮದುವೆ ಮೆರವಣಿಗೆ ಸಂದರ್ಭದಲ್ಲಿ ಸವರ್ಣಿಯರ-ಪರಿಶಿಷ್ಟ ಜಾತಿ ಸಮುದಾಯದವರ ಮಧ್ಯೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಗ್ರಾಮದ ದ್ಯಾವಮ್ಮ ದೇವಿ ದೇವಸ್ಥಾನ ಕಟ್ಟೆಯಲ್ಲಿ ಗ್ರಾಮದ ಸರ್ವ ಜನಾಂಗದವರು ಮತ್ತು ಗ್ರಾಮದ ಹಿರಿಯ ಮುಖಂಡರ ಸಮಕ್ಷಮ ನಡೆದ ಶಾಂತಿ ಸಮಿತಿ ಸಭೆಯಲ್ಲಿ  ಭಾಗವಹಿಸಿ ಮಾತನಾಡಿದರು.

     ಕಲಬುರಗಿ ಜಿಲ್ಲೆ ಸೂಫಿ ಸಂತರ ನಾಡಾಗಿದ್ದು, ವಿವಿಧ ಧರ್ಮದ ಜನರು ಇಲ್ಲಿ ನೆಲೆಸಿದ್ದಾರೆ. ನಾಗರಹಳ್ಳಿಯಲ್ಲಿ ನಡೆದ ಮೇ 26ರ ಘಟನೆ ಆಕಸ್ಮಿಕ ಎಂಬುದನ್ನು ಮೇಲ್ನೋಟಕ್ಕೆ ಕಂಡು ಬರುತ್ತಿದೆ.  ಶಾಂತಿ ಸಾಮರಸ್ಯಕ್ಕೆ ಹೆಸರು ವಾಸಿಯಾಗಿರುವ ನಾಗರಹಳ್ಳಿ ಗ್ರಾಮದಲ್ಲಿ ಈ ರೀತಿಯ ಸಮುದಾಯಗಳ ಮಧ್ಯೆ ಘರ್ಷಣೆ ನಡೆದಿರುವ ಉದಾಹರಣೆಯಿಲ್ಲ. ಗ್ರಾಮದ ಯುವಕರು ಯಾವುದೆ ಭಾವೋದ್ವೇಗಕ್ಕೆ ಒಳಗಾಗದೇ ಸಣ್ಣ ಘಟನೆಯನ್ನು ದೊಡ್ಡದಾಗಿ ಮಾಡಬಾರದು ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ