ಕೆಲವರು ಚಿನ್ನಾಭರಣ ಕದ್ದರೆ, ಮತ್ತೆ ಕೆಲವರು ನಗದು, ಇನ್ನೊಂದಿಷ್ಟು ಕಳ್ಳರು ಬೈಕ್, ಕಾರ್ ಹೀಗೆ ಕದಿಯುತ್ತಾರೆ. ಆದರೆ ಈ ಕಳ್ಳರು ಮಾತ್ರ ಕದಿಯುತ್ತಿದ್ದದ್ದು ಬೇರೆಯದನ್ನೇ.
ಈ ಕಳ್ಳರಿಗೆ ಶಾಲೆ, ಕಾಲೇಜುಗಳು, ಕೋರ್ಟ್ ಗಳೇ ಟಾರ್ಗೆಟ್ ಆಗಿದ್ದವು. ಇವರು ಕಾಲು ಇಟ್ಟರೆ ಇಲ್ಲಿನ ಕಂಪ್ಯೂಟರ್, ಲ್ಯಾಪ್ ಟಾಪ್, ಟಿವಿಗಳು ರಾತ್ರಿ, ಹಾಡುಹಗಲೇ ಎನ್ನದೇ ಮಂಗಮಾಯ ಆಗುತ್ತಿದ್ದವು. ಆದರೆ ಈ ಕಚೇರಿ ಕಳ್ಳರು ಈಗ ದಾವಣಗೆರೆ ಜಗಳೂರು ಪೊಲೀಸರ ಕಾರ್ಯಚರಣೆಯಲ್ಲಿ ಅಂದರ್ ಆಗಿದ್ದಾರೆ.
ಶಾಲೆ, ಕಾಲೇಜು, ಕೋರ್ಟ್ ಇನ್ನಿತರೆ ಸರ್ಕಾರಿ ಕಚೇರಿಗಳೇ ಹೆಚ್ಚಾಗಿ ಟಾರ್ಗೆಟ್ ಮಾಡಿಕೊಂಡ ಕಳ್ಳರು ತಮ್ಮ ಕೈ ಚಳಕ ತೋರುತ್ತಿದ್ದರು. ಸರ್ಕಾರಿ ಕಚೇರಿಗಳಲ್ಲಿ ಬಿಗಿ ಭದ್ರತೆ ಕಡಿಮೆ ಎಂದು ಕಳ್ಳತನಕ್ಕೆ ಇಳಿದಿದ್ದರು ಕಳ್ಳರು. ಇತ್ತೀಚೆಗೆ ದಾವಣಗೆರೆಗೆರೆ ಜಿಲ್ಲೆ ಜಗಳೂರಿನ ಹೋ.ಚಿ. ಬೋರಯ್ಯ ಕಾಲೇಜಿನ ಬೀಗ ಮುರಿದು ಕಳ್ಳತನ ನಡೆಸಿದ್ದರು. ಕಾಲೇಜಿನಲ್ಲಿ ಎರಡು ಕಂಪ್ಯೂಟರ್ ಸೇರಿದಂತೆ, ಕಳೆದ ವಾರ ಜಗಳೂರು ನ್ಯಾಯಾಲಯದ ಬಾಗಿಲು ಮುರಿದು ಕಳ್ಳತನ ನಡೆಸಿ ವಸ್ತುಗಳನ್ನು ಕದ್ದೊಯ್ದಿದ್ದರು ಎನ್ನಲಾಗಿದೆ. ಈ ಬಗ್ಗೆ ಜಗಳೂರು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಕಳೆದ ತಿಂಗಳಲ್ಲಿ ಕೊಟ್ಟೂರು ತಾಲೂಕು ಹೊಸಳ್ಳಿ ಹೈಸ್ಕೂಲ್ ನಲ್ಲಿ ಎಲ್.ಇ.ಡಿ ಟಿವಿ ಕಳ್ಳತನ ಮಾಡಿದ್ದು ಕೂಡ ಇವರೇ ಎಂಬ ಮಾಹಿತಿ ಪೊಲೀಸರ ಕೈ ಸೇರಿತ್ತು.
ತಡರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇವರನ್ನು ಗಮನಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ, ಬಳಿಕ ಪೊಲೀಸ್ ಭಾಷೆಯಲ್ಲೆ ಸತ್ಯ ಬಾಯಿ ಬಿಡಿಸಿದ್ದಾರೆ ಎನ್ನಲಾಗಿದೆ.
ಮೂವರು ಕಳ್ಳರನ್ನು ಈಗ ಜಗಳೂರು ಪೊಲೀಸರು ಬಂಧಿಸಿದ್ದು, ಚೌಡಪ್ಪ, ಗುರಪ್ಪ, ಓಬಯ್ಯ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ಜಗಳೂರು ತಾಲೂಕು ತಮಲೇಹಳ್ಳಿಯವರಾಗಿದ್ದು, ಬಂಧಿತರಿಂದ 1.12 ಲಕ್ಷ ರೂ. ಮೌಲ್ಯದ ಕಂಪ್ಯೂಟರ್ ಗಳು ಸೇರಿದಂತೆ ಒಂದು ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ.