ರಾಮಮಂದಿರ ಏಕೆ ಬೇಡ? ಕೃತಿ ಮೂಲಕ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ

ಗುರುವಾರ, 28 ಅಕ್ಟೋಬರ್ 2021 (22:21 IST)
ಬೆಂಗಳೂರು: ರಾಮಮಂದಿರ ಏಕೆ ಬೇಡ? ಕೃತಿ ಮೂಲಕ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಹಾಗೂ ಸಮದಾಯಗಳ ನಡುವೆ ದ್ವೇಷ ಬಿತ್ತಿದ ಆರೋಪದಡಿ ಸಾಹಿತಿ ಪ್ರೊ. ಕೆ.ಎಸ್ ಭಗವಾನ್ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ವಿಳಂಬ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರೊಫೆಸರ್ ಕೆ.ಎಸ್ ಭಗವಾನ್ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸರ್ಕಾರ 8 ವಾರದಲ್ಲಿ ಪರಿಗಣಿಸಿ ಇತ್ಯರ್ಥಪಡಿಸಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಅರ್ಜಿ ಇತ್ಯರ್ಥಪಡಿಸದಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ದಿನಕ್ಕೆ 2 ಸಾವಿರ ರೂಪಾಯಿಯಂತೆ ದಂಡ ಪಾವತಿಸಬೇಕು ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಪ್ರಕರಣವೇನು?: ಪ್ರೊ. ಕೆ.ಎಸ್. ಭಗವಾನ್ 2018ರಲ್ಲಿ 'ರಾಮಮಂದಿರ ಏಕೆ ಬೇಡ?' ಕೃತಿ ರಚಿಸಿದ್ದರು. ಇದನ್ನು ಸರ್ಕಾರ ತನ್ನ ಗ್ರಂಥಾಲಯಗಳಿಗೂ ಸರಬರಾಜು ಮಾಡಿತ್ತು. ಆದರೆ, ಕೃತಿಯಲ್ಲಿ ರಾಮ ಹಾಗೂ ಹಿಂದುತ್ವದ ಕಲ್ಪನೆಗಳಿಗೆ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಿದೆ. ಅಲ್ಲದೇ, ಸಮುದಾಯಗಳ ನಡುವೆ ದ್ವೇಷ ಬಿತ್ತಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇಕ್ಕೇರಿ ನಿವಾಸಿ ಮಹಾಬಲೇಶ್ವರ ಎಂಬುವರು ಸಾಗರ ಜೆಎಂಎಫ್ ಸಿ ಕೋರ್ಟ್​​ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಅಲ್ಲದೇ, ಪ್ರೊಫೆಸರ್ ಐಪಿಸಿ ಸೆಕ್ಷನ್ 153 ಎ (ಧಾರ್ಮಿಕ ಸೌಹಾರ್ದತೆ ಕದಡಿ ದ್ವೇಷ ಬಿತ್ತಿದ) ಐಪಿಸಿ ಸೆಕ್ಷನ್ 295 ಎ (ಪೂಜಾ ಸ್ಥಳ ಅವಮಾನಿಸಿ ಧಾರ್ಮಿಕ ನಂಬಿಕೆಗೆ ಧಕ್ಕೆ) ಹಾಗೂ ಐಪಿಸಿ ಸೆಕ್ಷನ್ 500 (ಮಾನಹಾನಿ) ಅಡಿ ವಿಚಾರಣೆ ನಡೆಸಲು ಪೂರ್ವಾನುಮತಿ ಕೋರಿ 2019ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ಕಾರ ಅರ್ಜಿ ಪರಿಗಣಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ದೂರುದಾರರು ತಮ್ಮ ಅರ್ಜಿಯನ್ನು ಸರ್ಕಾರ ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವಂತೆ ನಿರ್ದೇಶಿಸಲು ಕೋರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ