ದಾವಣಗೆರೆ: ತಾನು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸುವುದಕ್ಕಾಗಿ ಕುರುಬ ಸಮುದಾಯದವರು ಕಾಂಗ್ರೆಸ್‌ಗೆ ಮತ ನೀಡಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಲೋಕಸಭೆ ಚುನಾವಣೆ ಅಂಗವಾಗಿ ನಗರದಲ್ಲಿ ಶನಿವಾರ ಕುರುಬ ಸಮುದಾಯದವರು ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದರೆ ನೀವು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್‌ನ ಹೆಚ್ಚು ಅಭ್ಯರ್ಥಿಗಳು ಗೆದ್ದರೆ ಸಿದ್ದರಾಮಯ್ಯ ನಾಯಕತ್ವಕ್ಕೆ ಹೆಸರು ಬರುತ್ತದೆ ಅಲ್ಲವೇ? ನನ್ನ ನಾಯಕತ್ವ ಉಳಿಯುತ್ತದೆ ಅಲ್ಲವೇ? ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿಯಾದ ನಿಮ್ಮ ಸಮುದಾಯದ ನಾನು ಬೇಕಾ, ಇಲ್ಲ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ಬೇಕಾ ನೀವೇ ನಿರ್ಧರಿಸಿ. ವಿನಯ್‌ಗೆ ಒಂದೂ ಮತ ಕೊಡಬಾರದು ಎಂದೂ ಅವರು ಇದೇ ವೇಳೆ ಕೋರಿದರು.
ವಿನಯ್ ಕುರುಬ ಸಮುದಾಯದವರು ಎಂದು ಮತ ನೀಡಬೇಕಾ? ಒಂದು ಜಾತಿಯ ಮತದಿಂದ ಯಾವುದಾದರೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವೇ? ನೀವೇ ಹೇಳಿ. ಅವರಿಗೆ ಮುಂದೆ ಭವಿಷ್ಯವಿದೆ. ಈಗ ಸ್ಪರ್ಧೆಯಿಂದ ಹಿಂದೆ ಸರಿಯಿರಿ ಎಂದು ಹೇಳಿದರೂ ಕೇಳಲಿಲ್ಲ. ಅಂತಹವರಿಗೆ ನೀವು ಮತ ಹಾಕುವಿರಾ? ಎಂದು ಪ್ರಶ್ನಿಸಿದರು.