ಕಲುಷಿತ ನೀರು ಸೇವಿಸಿ ಮಹಿಳೆ ಸಾವು
ಕಲುಷಿತ ನೀರು ಸೇವಿಸಿ ವಾಂತಿ, ಭೇದಿ ಉಲ್ಬಣವಾಗಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮಕ್ಕೆ ನೀರು ಪೂರೈಸುವ ಪೈಪ್ನಲ್ಲಿ ಚರಂಡಿ ನೀರು ಸೇರ್ಪಡೆಯಾದ ಪರಿಣಾಮ ಕಲುಷಿತ ನೀರು ಸೇವನೆಯಿಂದ ಗ್ರಾಮದಲ್ಲಿ ವಾಂತಿ, ಭೇದಿ ಉಲ್ಬಣವಾಗಿದೆ. ಗ್ರಾಮದ 30 ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ನಿನ್ನೆ 24 ಜನರಿಗೆ ,ಇಂದು 6 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಅದರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತೆಲಂಗಾಣದ ನಾರಾಯಣಪೇಟೆ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಸುಕಿನ ಜಾವ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಸಾವಿತ್ರಮ್ಮ ಇಂದು ನಸುಕಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಮಹಿಳೆ. ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ 13 ಜನ ದಾಖಲಾಗಿದ್ದು, ತೆಲಂಗಾಣದ ನಾರಾಯಣಪೇಟೆಯಲ್ಲಿ 8 ಜನ, ಮೆಹಬೂಬ ನಗರದ ಖಾಸಗಿ ಆಸ್ಪತ್ರೆಯಲ್ಲಿ 4 ವರ್ಷದ ಬಾಲಕ ದಾಖಲಾಗಿದ್ದಾರೆ. ಗ್ರಾಮದ ಜನರ ಆರೋಗ್ಯದ ದೃಷ್ಟಿಯಿಂದ ವೈದ್ಯರ ತಂಡ ಗ್ರಾಮದಲ್ಲಿಯೇ ಬೀಡುಬಿಟ್ಟಿದೆ.