Yadagiri: ಕಾಂಗ್ರೆಸ್ ಕಚೇರಿಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌

Sampriya

ಸೋಮವಾರ, 26 ಮೇ 2025 (18:12 IST)
ಯಾದಗಿರಿ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿಯಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯಾದಗಿರಿ ನಗರ ಪೊಲೀಸರು ರೌಡಿಶೀಟರ್ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಯಾದಗಿರಿ ಜಿಲ್ಲಾ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಜುಳಾ ಗೂಳಿಯ ಬೆಂಬಲಿಗನಾಗಿದ್ದ ಆರೋಪಿ ರೌಡಿಶೀಟರ್ ಬಾಬುಗೌಡ ಅಗತೀರ್ಥ ಹಾಗೂ ಮಂಜುಳಾ ಪತಿ ಶಂಕರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಮಂಜುಳಾ ಗೂಳಿ ಅವರಿಗೆ ಈ ಬಾರಿ ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದರಿಂದ ಕೋಪಗೊಂಡು ಶಂಕರ್ ಗೂಳಿ ಹಾಗೂ ರೌಡಿಶೀಟರ್ ಸೇರಿಕೊಂಡು ಮೇ 24ರಂದು ರಾತ್ರಿ 1 ಗಂಟೆ ಸುಮಾರಿಗೆ ಸ್ಕೂಟಿಯಲ್ಲಿ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.

ಬೆಂಕಿಯಿಟ್ಟ ಬಳಿಕ ತಲೆಮರೆಸಿಕೊಂಡು, ಆಂಧ್ರಪ್ರದೇಶದ ವಿಜಯವಾಡದಲ್ಲಿ ತನ್ನ ಗೆಳೆಯನ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ರೌಡಿಶೀಟರ್‌ನನ್ನು ಯಾದಗಿರಿ ನಗರ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಈಗಾಗಲೇ ಇನ್ನೋರ್ವ ಆರೋಪಿ ಶಂಕರ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಪ್ರಕರಣ ಹಿನ್ನೆಲೆ: ಯಾದಗಿರಿ ನಗರದ ಕನಕ ವೃತ್ತದ ಬಳಿಯಿರುವ ಕಾಂಗ್ರೆಸ್ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಪರಿಣಾಮ ಕಚೇರಿಯಲ್ಲಿದ್ದ ಸೋಪಾ, ಎಸಿ ಎಲ್ಲವೂ ಸುಟ್ಟು ಭಸ್ಮವಾಗಿದ್ದವು. ಕಚೇರಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರು ಸೇರಿ ಪರಿಶೀಲನೆ ನಡೆಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ