ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಶಕ್ತಿಯ ಮೇಲೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಹಾಗೂ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವ ಸಂಕಲ್ಪ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ನಗರದ ಅರಮನೆ ಮೈದಾನದ ಗೇಟ್ ನಂ.4, ಗಾಯತ್ರಿ ಗ್ರ್ಯಾಂಡ್ ನಲ್ಲಿ ಇಂದು ನಡೆದ ರಾಜ್ಯ ಕಾರ್ಯಕಾರಿಣಿಯ ಸಂದರ್ಭದಲ್ಲಿ 50 ವರ್ಷ ಸಕ್ರಿಯ ರಾಜಕಾರಣದಲ್ಲಿ ನಡೆದು ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಭಿನಂದಿಸಲಾಯಿತು. ಕಾರ್ಯಕರ್ತರಿಂದ ಗೌರವ ಸಮರ್ಪಿಸಲಾಯಿತು. ಬಳಿಕ ಅಭಿನಂದನೆಗೆ ಉತ್ತರವಾಗಿ ಯಡಿಯೂರಪ್ಪ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಈ ಹಾಗೂ ಭ್ರಷ್ಟ ಸರಕಾರವನ್ನು ಕಿತ್ತೊಗೆದು ಅಭಿವೃದ್ಧಿಪರ ಬಿಜೆಪಿ ಸರಕಾರವನ್ನು ತರಲು ನೀವೆಲ್ಲರೂ ಸಿದ್ಧರಿದ್ದೀರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಪ್ರಥಮ ರಾಜ್ಯವಾಗಿ ಬಿಜೆಪಿ ಆಡಳಿತಕ್ಕೆ ತಂದವರು ಎಂದು ತಿಳಿಸಿದರು. ದೂರದೃಷ್ಟಿ ಚಿಂತನೆಯ ಮನೋಭಾವ, ಸಮರ್ಪಕ ಯೋಚನೆ, ಯೋಜನೆ ಅನುಷ್ಠಾನದ ತಾಕತ್ತು, ಜೀವನದ ಒಳಿತು ಕೆಡುಕುಗಳನ್ನು ಸ್ಥಿತಪ್ರಜ್ಞನಂತೆ ಕರ್ತವ್ಯ ನಿರ್ವಹಿಸಿದ ಸಮರ್ಥ ರಾಜಕೀಯ ನಾಯಕ ಯಡಿಯೂರಪ್ಪನವರು ಎಂದು ವಿಶ್ಲೇಷಿಸಿದರು.
ಬೂಕನಕೆರೆಯಿಂದ ಹೊರಟು ಶಿಕಾರಿಪುರಕ್ಕೆ ಹೋಗಿ ಅಲ್ಲಿಂದ ಬೆಂಗಳೂರು, ದೆಹಲಿವರೆಗೆ ತೆರಳುವ ಎಲ್ಲ ಸಂದರ್ಭದಲ್ಲೂ ದೊಡ್ಡ ಸಂಘರ್ಷವನ್ನು ಅವರು ಎದುರಿಸಿದ್ದರು ಎಂದು ತಿಳಿಸಿದರು. ಸಂಘರ್ಷದ, ಸಂಘಟನೆಯ ಅದ್ಭುತ ಹಾದಿಯಲ್ಲಿ ಅವರು ನಡೆದು ಬಂದಿದ್ದಾರೆ ಎಂದು ವಿವರಿಸಿದರು. ಕಾರ್ಯಕರ್ತರು, ಮುಖಂಡರ ಬೆನ್ನು ತಟ್ಟಿ ಅವರು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳುತ್ತಿದ್ದುದನ್ನು ಉದಾಹರಣೆಗಳ ಜೊತೆ ತಿಳಿಸಿದರು. ಇದೇವೇಳೆ ಯಡಿಯೂರಪ್ಪನವರು ನಡೆದುಬಂದ ದಾರಿಯ ಕುರಿತ ವಿಡಿಯೋ ಪ್ರದರ್ಶಿಸಲಾಯಿತು.