₹180 ಕೋಟಿ ಗುಳುಂ ಆರೋಪ: ಸಚಿವ ನಾಗೇಂದ್ರ ವಜಾಕ್ಕೆ ಬಿಜೆಪಿ ಆಗ್ರಹ

Sampriya

ಸೋಮವಾರ, 27 ಮೇ 2024 (19:10 IST)
Photo Courtesy X
ಬೆಂಗಳೂರು: ರಾಜ್ಯದ ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ನಾಗೇಂದ್ರ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿ ರಾಜ್ಯ ಮತ್ತು ರಾಜ್ಯದ ಜನತೆಯನ್ನು ಬಲಿ ಪಡೆಯುತ್ತಿದೆ. ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯಾಗಿದ್ದ ಚಂದ್ರಶೇಖರ್ ಅವರು ಈ ಸರ್ಕಾರದ ಭ್ರಷ್ಟಾಚಾರದ ಬಲಿಪಶುವಾಗಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಚಂದ್ರಶೇಖರ್ ಅವರು ತಮ್ಮ ಡೆತ್ ನೋಟ್‍ನಲ್ಲಿ ನಿಗಮದ ಎಂ.ಡಿ. ಪದ್ಮನಾಭ, ಇನ್ನೊಬ್ಬ ಅಧಿಕಾರಿ ಹೆಸರನ್ನು ಬರೆದಿದ್ದು, ಈ ಇಲಾಖೆಯ ಸಚಿವರ ಮೌಖಿಕ ಆದೇಶದ ಪ್ರಕಾರ ಇಷ್ಟೆಲ್ಲ ಮಾಡಬೇಕಾಗಿದೆ ಎಂದು ಉಲ್ಲೇಖಿಸಿದ್ದಾರೆ. ತಮಗೆ ಬೆದರಿಕೆ ಒಡ್ಡಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಪರಿಶಿಷ್ಟ ಪಂಗಡದ ಬಡವರಿಗೆ ಸೇರಬೇಕಿದ್ದ ₹ 187 ಕೋಟಿಯನ್ನು ಸಚಿವರು, ನಿಗಮದ ಎಂ.ಡಿ. ಮತ್ತು ಅಧಿಕಾರಿಗಳು ಸೇರಿ ನಕಲಿ ಖಾತೆ ತೆರೆದು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾಗಿ ಹೇಳಿದ ಅವರು, ಭ್ರಷ್ಟಾಚಾರಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇರೆ ಬೇಕಿಲ್ಲ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದಲ್ಲಿ ಈಶ್ವರಪ್ಪನವರ ಮೇಲೆ ಇದೇ ರೀತಿಯ ಆರೋಪ ಬಂದಿತ್ತು. ಅಲ್ಲಿ ಮೃತನ ಕೈಬರಹ ಇರಲಿಲ್ಲ. ಇಲ್ಲಿ ನೇಣಿಗೆ ಶರಣಾದ ಚಂದ್ರಶೇಖರ್ ತನ್ನ ಹಸ್ತಾಕ್ಷರದಲ್ಲಿ ಇಲಾಖೆಯ ಸಚಿವರನ್ನು ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯನವರು ಇಷ್ಟರೊಳಗೆ ನಾಗೇಂದ್ರರನ್ನು ಸಂಪುಟದಿಂದ ವಜಾ ಮಾಡಬೇಕಿತ್ತು. ಅವತ್ತು ಕೇವಲ ₹ 9 ಕೋಟಿ ರೂ. ಆರೋಪಕ್ಕೆ ಸಂಬಂಧಿಸಿ ಈಶ್ವರಪ್ಪನವರ ರಾಜೀನಾಮೆಗೆ ಗಂಟಲು ಕಿರುಚಿಕೊಂಡ ಸಿದ್ದರಾಮಯ್ಯನವರು ಈಗೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಆತ್ಮಹತ್ಯೆಗೆ ದುಷ್ಪ್ರೇರಣೆ ಕೊಟ್ಟ ಸಂಬಂಧ ಸಚಿವರ ಹೆಸರನ್ನು ಎಫ್‍ಐಆರ್ ಅಡಿಯಲ್ಲಿ ಸೇರಿಸಬೇಕು. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಒತ್ತಾಯಿಸಿದರು. ಕೂಡಲೇ ಮೃತರ ಕುಟುಂಬಕ್ಕೆ ರಕ್ಷಣೆ ಕೊಡಬೇಕು. ಭ್ರಷ್ಟಾಚಾರದಿಂದ ಒಂದು ಬಲಿ ಪಡೆದುದಾಗಿ ಕುಟುಂಬದ ಮುಂದೆ ಇಡೀ ಸಚಿವ ಸಂಪುಟ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದರು.

ಸಿದ್ದರಾಮಯ್ಯ ಅವರ ನಿಜವಾದ ಮುಖವಾಡ ಬಯಲಾಗಿದೆ. ಈ ಸರ್ಕಾರ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿಹೋಗಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಇದನ್ನು ತೀಕ್ಷ್ಣವಾಗಿ ಪರಿಗಣಿಸಲಿದೆ. ಸಚಿವರು ರಾಜೀನಾಮೆ ಕೊಡುವವರೆಗೆ ಹೋರಾಟ ಮಾಡಲಿದ್ದೇವೆ. ಈ ಸರ್ಕಾರದ ಭ್ರಷ್ಟಾಚಾರಕ್ಕೆ ಚಂದ್ರಶೇಖರ್ ಅವರು ಮೊದಲ ಬಲಿ ಎಂದು ತಿಳಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳಬೇಕು. ಕಾನೂನಿನ ಮುಂದೆ ಯಾವುದೇ ಪಕ್ಷಪಾತ ಇಲ್ಲ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ