ಕೊಡಗಿನ ಹನಿ ವ್ಯಾಲಿ ನಿಸರ್ಗ ಸೌಂದರ್ಯದ ಮುಕುಟ

WD
ಬಿ.ಎಂ.ಲವಕುಮಾರ್

ಕೆಲವು ದಶಕಗಳ ಹಿಂದೆ ದೂರದ ಮೈಸೂರಿನಲ್ಲಿ ಓದಿದ ಹುಡುಗನೊಬ್ಬ ಕೊಡಗಿನ ದಟ್ಟ ಕಾಡಿನ ನಡುವೆ ಮನೆ ಕಟ್ಟಿ ನೆಲೆಸಿ ಕಾಫಿ, ಏಲಕ್ಕಿ, ಬೆಳೆಸಿ ಜೇನು ಕೃಷಿ ಮಾಡುತ್ತೇನೆ ಎಂದಾಗ ಕೆಲವರು ಇವನಿಗೇನಾಗಿದೆ ಮಾಡಲು ಬೇರೆ ಕೆಲಸವಿಲ್ಲವೆ? ಎಂದು ಮಾತಾಡಿಕೊಂಡಿದ್ದರು. ಆದರೆ ಅದೇ ಜನ ಇವತ್ತು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಸಾಧನೆ ಮಾಡಿತೋರಿಸಿದ್ದಾರೆ.

WD
ಕೊಡಗಿನ ತಡಿಯಂಡಮೋಳ್ ಬೆಟ್ಟದ ತಪ್ಪಲಿನ ಕುಗ್ರಾಮ ಯುವಕಪಾಡಿಯಲ್ಲಿ ಕಾಫಿ, ಏಲಕ್ಕಿ, ಕರಿಮೆಣಸು, ಆಂಥೋರಿಯಂ ಹಾಗೂ ಜೇನು ಕೃಷಿ ಮಾಡಿ ಅದರಲ್ಲಿ ಯಶಸ್ಸು ಕಾಣವುದರ ಮೂಲಕ ಕಾಡಿನ ನಡುವೆಯೂ ನಿರಾಳವಾಗಿ ಬದುಕಬಹುದು. ಅಷ್ಟೇ ಅಲ್ಲ ಇಲ್ಲಿನ ನಿಸರ್ಗ ಸೌಂದರ್ಯವನ್ನು ದೂರದ ವಿದೇಶಿಯರಿಗೆ ಪರಿಚಯಿಸಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ ಅಪ್ಪಾರಂಡ ಸುರೇಶ್ಚಂಗಪ್ಪ, ಪತ್ನಿ ಸುಶೀಲಾ ಸುರೇಶ್ ದಂಪತಿಗಳು.

ಹಳ್ಳಿಯೆಂದರೆ ಮೂಗು ಮುರಿಯುವ ನಗರದ ರಂಗುರಂಗಿನ ಜೀವನಕ್ರಮಕ್ಕೆ ಮಾರುಹೋಗುವ ಮಂದಿಗೆ ಇವರ ಸಾಧನೆ ನಿಜಕ್ಕೂ ಮಾರ್ಗದರ್ಶಿ ಎಂದರೆ ತಪ್ಪಾಗಲಾರದು.

WD
ಸುಂದರ ತಾಣ: ಈ ದಂಪತಿಗಳು ನೆಲೆನಿಂತಿರುವ ತಾಣವೇ ಹನಿವ್ಯಾಲಿ. ಈ ಹನಿವ್ಯಾಲಿಗೆ ಹೋಗಬೇಕೆಂದರೆ ಮಡಿಕೇರಿಯಿಂದ ಸುಮಾರು 23 ಕಿ.ಮೀ.ದೂರದಲ್ಲಿರುವ ನಾಪೋಕ್ಲಿಗೆ ತೆರಳಿ ಬಳಿಕ ಕಕ್ಕಬ್ಬೆಯ ಕಬ್ಬಿನಕಾಡಿಗೆ ಹೋಗಿ ಅಲ್ಲಿಂದ ಬಲಕ್ಕೆ ಮಣ್ಣಿನ ರಸ್ತೆಯಲ್ಲಿ ಸುಮಾರು ಮೂರು ಕಿ.ಮೀ. ಸಾಗಬೇಕು. ಏರುರಸ್ತೆಯಲ್ಲಿ ಸಾಗುವುದು ವಿಶಿಷ್ಟ ಅನುಭವ. ಫೋರ್ವೀಲ್ ವಾಹನ ಹೊರತುಪಡಿಸಿ ಬೇರೆ ವಾಹನಗಳಲ್ಲಿ ಸಾಗುವುದು ಸ್ವಲ್ಪ ಕಷ್ಟವೇ... ಆದರೂ ಕಷ್ಟಪಟ್ಟು ಸಾಗಿ ಹನಿವ್ಯಾಲಿ ತಲುಪುತ್ತಿದ್ದಂತೆಯೇ ಅಲ್ಲಿನ ನಿಸರ್ಗ ಸೌಂದರ್ಯ ಮೈಮನಗಳನ್ನು ಪುಳಕಗೊಳಿಸುತ್ತದೆ.

ಹಿತವಾಗಿ ಬೀಸುವ ತಂಗಾಳಿ, ಜುಳು ಜುಳು ಹರಿಯುವ ಝರಿಗಳು, ಗುಡ್ಡದ ತಪ್ಪಲಿನ ಕಾಫಿ ತೋಟಗಳು, ಮನೆ ಸುತ್ತಲೂ ಬೆಳೆದು ಹೂಬಿಟ್ಟು ಕಂಗೊಳಿಸುವ ಹೂಗಿಡಗಳು ಮನಸೆಳೆಯುತ್ತವೆ.

ಹನಿವ್ಯಾಲಿ ಇಂದು ವಿದೇಶಗಳ ಪ್ರವಾಸಿಗರ ಗಮನಸೆಳೆದಿದ್ದು ಇದಕ್ಕೆ ಈ ದಂಪತಿಗಳ ಸಾಧನೆಯೇ ಕಾರಣವಾಗಿದೆ. ತಡಿಯಂಡಮೋಳ್ ಬೆಟ್ಟದ ತಪ್ಪಲಿನಲ್ಲಿರುವ ಕಾರಣ ಹನಿವ್ಯಾಲಿ ತಾಣ ಸದಾ ತಂಪಾಗಿದ್ದು, ಏಲಕ್ಕಿ ಹಾಗೂ ಜೇನು ಕೃಷಿಗೆ ಪ್ರಶಸ್ತವಾಗಿದೆ.

WD
ಹಾಗೆನೋಡಿದರೆ ಸುರೇಶ್ಚಂಗಪ್ಪರವರು ಜೇನು ಕೃಷಿಯಲ್ಲಿ ಮೊದಲಿನಿಂದಲೂ ಅನುಭವಿ. ಜೇನು ಕೃಷಿಯನ್ನು ಆರಂಭ ಮಾಡುವಾಗ ಸುಮಾರು 150 ಜೇನು ಪೆಟ್ಟಿಗೆಗಳಿದ್ದವಾದರೂ ಸುಶೀಲರ ಕೈಹಿಡಿದ ಬಳಿಕ ಅದರ ಸಂಖ್ಯೆ ಹೆಚ್ಚುತ್ತಾ ಹೋಗಿ 500ಕ್ಕೆ ತಲುಪಿತ್ತು. 1994ಕ್ಕೂ ಮೊದಲು ಇವರು ದಿನವೊಂದಕ್ಕೆ 500ಕೆ.ಜಿ.ಯಷ್ಟು ಜೇನನ್ನು ಸಂಗ್ರಹಿಸಿದ್ದೂ ಇದೆ. ಆದರೆ ನಂತರದ ದಿನಗಳಲ್ಲಿ ಜೇನಿಗೆ ವೈರಸ್ ರೋಗ ತಗುಲಿದ್ದರಿಂದ ಉತ್ಪಾದನೆ ಕುಂಠಿತಗೊಂಡಿತ್ತು.

WD
ಹೋಂಸ್ಟೇ ಸ್ಥಾಪನೆ: ಅವತ್ತಿನ ದಿನಗಳಲ್ಲಿ ಕಾಫಿಗೆ ಹೆಚ್ಚಿನ ಬೆಲೆಯಿರಲಿಲ್ಲ, ಏಲಕ್ಕಿಯಿಂದ ಹೆಚ್ಚಿನ ಇಳುವರಿ ಸಿಗುತ್ತಿರಲಿಲ್ಲ ಇಂತಹ ಸಂದರ್ಭದಲ್ಲಿ ಸುಶೀಲಾ ಚಂಗಪ್ಪರವರು ಪರ್ಯಾಯವಾಗಿ ನರ್ಸರಿ ಮಾಡಿದರು ಗಿಡಗಳನ್ನು ಬೆಳೆಸಿ ನಾಪೋಕ್ಲಿಗೆ ಕೊಂಡೊಯ್ದು ಮಾರಾಟಮಾಡಿದರು, ಹೂವು ಬೆಳೆಸುವುದು, ಕೋಳಿ ಸಾಕಣೆ ಎಲ್ಲವನ್ನೂ ಮಾಡಿದರು ಆದರೆ ಅದ್ಯಾವುದೂ ಅವರ ಕೈಹಿಡಿಯಲಿಲ್ಲ. ಆಗ ಅವರನ್ನು ಕೈಬೀಸಿ ಕರೆದದ್ದು ಹೋಂಸ್ಟೇ ಉದ್ಯಮ.

ನಾಪೋಕ್ಲು ಸುತ್ತಮುತ್ತ ವೀಕ್ಷಣಾರ್ಹ ದೇಗುಲಗಳು... ಚಾರಣರಿಗೆ ಹೇಳಿ ಮಾಡಿಸಿದ ಬೆಟ್ಟಗುಡ್ಡಗಳು... ಮೈಮನ ಸೆಳೆಯುವ ಜಲಪಾತಗಳು ಹೀಗೆ ಹಲವಾರು ವೀಕ್ಷಣಾರ್ಹ ತಾಣಗಳಿವೆ. ಆದರೆ ಇವುಗಳನ್ನು ನೋಡಲು ಆಗಮಿಸುವ ಪ್ರವಾಸಿಗರಿಗೆ ಊಟ ಹಾಗೂ ವಸತಿ ಸಮಸ್ಯೆ ಕಾಡುತ್ತಿತ್ತು. ಇದನ್ನರಿತ ಸುಶೀಲಾ ಸುರೇಶ್ರವರು ಪ್ರವಾಸಿಗರಿಗೆ ಪ್ರತ್ಯೇಕ ವಸತಿ, ಊಟದ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ‘ಹೋಂಸ್ಟೇ’ ಆರಂಭಿಸಿದರು.

ಬೀಸುವ ಕುಳಿರ್ಗಾಳಿ... ಜೇನುನೊಣಗಳ ಝೇಂಕಾರ... ಹಕ್ಕಿಗಳ ಚಿಲಿಪಿಲಿ ಇಂಚರ... ಕಣ್ಣು ಹಾಯಿಸಿದಲೆಲ್ಲಾ ಹಸಿರು ಹಚ್ಚಡದ ನಿಸರ್ಗ... ಮನೆಯ ಸುತ್ತ ಅರಳಿ ಕಂಗೊಳಿಸುವ ವಿವಿಧ ಬಗೆಯ ಹೂವಿನಗಿಡಗಳು... ಕಾಫಿ, ಏಲಕ್ಕಿ, ಕರಿಮೆಣಸಿನ ಕಂಪು... ಇಂತಹ ನಿಸರ್ಗ ಸೌಂದರ್ಯವನ್ನು ಹೊಂದಿದ ಹನಿವ್ಯಾಲಿ ತಾಣ ಬಹುಬೇಗ ದೇಶವಿದೇಶಗಳ ಪ್ರವಾಸಿಗರನ್ನು ಸೆಳೆಯತೊಡಗಿತು. ಅಷ್ಟೇ ಅಲ್ಲ ಸುಶೀಲಾ ಸುರೇಶ್ ಹಾಗೂ ಸುರೇಶ್ ಚಂಗಪ್ಪ ದಂಪತಿಗಳು ಅತಿಥಿಗಳನ್ನು ಆದರಿಸುತ್ತಿದ್ದ ರೀತಿಯೂ ಪ್ರವಾಸಿಗರನ್ನು ಸೆಳೆಯುವಲ್ಲಿ ಸಹಕಾರಿಯಾಯಿತು. ಹಾಗಾಗಿ ದೂರದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹನಿವ್ಯಾಲಿಯತ್ತ ಬರತೊಡಗಿದರು.

ಇವತ್ತು ವರ್ಷಕ್ಕೆ ಮುನ್ನೂರಕ್ಕಿಂತಲೂ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಕೊಡಗಿನ ಸಾಂಪ್ರದಾಯಿಕ ಅಡುಗೆಯೊಂದಿಗೆ ಪ್ರವಾಸಿಗರು ಕೇಳುವ ವಿವಿಧ ತಿನಿಸುಗಳನ್ನು ಸುಶೀಲಾ ಸುರೇಶ್ರವರೇ ತಯಾರಿಸಿಕೊಡುತ್ತಾರೆ.

WD
ನೀಲಕಂಡಿ ಜಲಪಾತ: ಇನ್ನು ಹನಿವ್ಯಾಲಿಯಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ಬೆಟ್ಟಗುಡ್ಡಗಳ. ದಟ್ಟ ಕಾನನದ ನಡುವೆ ಬೆಡಗು ಬಿನ್ನಾಣದ ಜಲಪಾತವಿದೆ. ಈ ಜಲಪಾತ ಹನಿವ್ಯಾಲಿಗೊಂದು ಮೆರಗು ನೀಡಿದೆ. ಇದನ್ನು ನೋಡ ಬೇಕಾದರೆ ಒಂದಷ್ಟು ಕಷ್ಟಪಡಲೇಬೇಕು. ಏರು ಹಾದಿಯಲ್ಲಿ ಉಸಿರು ಬಿಗಿಹಿಡಿದು ಹತ್ತಬೇಕು... ಬೆಟ್ಟಗುಡ್ಡಗಳ ಕಡಿದಾದ ಕಾಲು ದಾರಿಯಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ನಡೆಯಬೇಕು... ಹೀಗೆ ನಡೆಯುವಾಗ ತಡಿಯಂಡಮೋಳ್ ಬೆಟ್ಟಶ್ರೇಣಿಯ ವಿಹಂಗಮ ನೋಟ ಕಣ್ಮನ ಸೆಳೆಯುತ್ತದೆ. ಒಂದೆಡೆ ಮುಗಿಲೆತ್ತರಕ್ಕೇರಿ ನಿಂತ ಪರ್ವತ ಶ್ರೇಣಿಗಳು ಮತ್ತೊಂದೆಡೆ ಕಣ್ಣು ಎಟುಕದಷ್ಟು ಆಳದ ಕಂದಕ. ಅದರ ನಡುವೆ ಬೆಳೆದು ನಿಂತ ವೃಕ್ಷ ಸಂಕುಲಗಳ ನಡುವೆ ಭೋರ್ಗರೆದು ಹರಿಯುವ ಪಾತಿ ನದಿ ರೋಮಾಂಚನವನ್ನುಂಟು ಮಾಡುತ್ತದೆ. ಇದೆಲ್ಲವನ್ನೂ ಆಸ್ವಾದಿಸುತ್ತಾ ಮುನ್ನಡೆದಾಗ ದೂರದಲ್ಲಿ ಬೆಟ್ಟದಲ್ಲಿ ಕರಿಹೆಬ್ಬಂಡೆಗಳ ಮೇಲೆ ಬೆಳ್ಳಿಸುರಿದಂತೆ ಜಲಪಾತವೊಂದು ಕಾಣಸಿಗುತ್ತದೆ. ಈ ಜಲಪಾತವನ್ನು ಸ್ಥಳೀಯರು ನೀಲಕಂಡಿ ಜಲಪಾತ ಎಂದು ಕರೆಯುತ್ತಾರೆ. ಸುಮಾರು 150 ಅಡಿಗಿಂತಲೂ ಹೆಚ್ಚು ಎತ್ತರದಿಂದ ವಿವಿಧ ಹಂತದಲ್ಲಿ ಧುಮುಕುವ ಜಲಪಾತ ಗಮನಸೆಳೆಯುತ್ತದೆ. ಈ ಜಲಪಾತವಿರುವ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಕುರುಂಜಿ ಗಿಡಗಳು ಬೆಳೆದಿದ್ದು ಇವುಗಳು ಹತ್ತೌ ಹನ್ನೆರಡು ವರ್ಷಗಳಿಗೊಮ್ಮೆ ಹೂ ಬಿಟ್ಟಾಗ ಇಡೀ ಬೆಟ್ಟ ನೀಲಿಯಾಗಿ ಗೋಚರಿಸುತ್ತದೆ. ಹಾಗಾಗಿ ಜಲಧಾರೆಯನ್ನು ನೀಲಕಂಡಿ ಜಲಪಾತ ಎಂದು ಸ್ಥಳೀಯರು ಕರೆಯುತ್ತಾರೆ.

WD
ಮನೆಬೆಳಗುವ ವಿದ್ಯುತ್: ನೀಲಕಂಡಿ ಜಲಪಾತದಿಂದ ನೀರನ್ನು ಪೈಪುಗಳ ಮೂಲಕ ಸುಮಾರು ಮೂರು ಕಿ.ಮೀ. ದೂರದ ಹನಿವ್ಯಾಲಿಗೆ ಹರಿಸಿರುವ ಸುರೇಶ್ಚಂಗಪ್ಪ ಆ ನೀರಿನಿಂದ ಯಾವುದೇ ಮೋಟಾರ್ ಇಲ್ಲದೆ ಸ್ಪಿಂಕ್ಲರ್ ಮೂಲಕ ನೀರು ಹಾಯಿಸುತ್ತಾರೆ. ಅಷ್ಟೇ ಅಲ್ಲ ಆ ನೀರನ್ನು ಬಳಸಿ ಅದರಿಂದ ವಿದ್ಯುತ್ ತಯಾರಿಸಿ ತಮ್ಮ ಮನೆ ಬೆಳಗಿಸಿಕೊಳ್ಳುತ್ತಾರೆ ಎಂದರೆ ಅಚ್ಚರಿಯಾಗುತ್ತದೆ. ಜಲಪಾತದ ನೀರನ್ನು ಆಧುನಿಕ ತಂತ್ರಜ್ಞಾನ ಬಳಸಿ ವಿದ್ಯುತ್ ತಯಾರಿಸಲು ಸಹಕಾರಿಯಾಗಿರುವ ಕುಟುಂಬದ ಸ್ನೇಹಿತೆಯಾಗಿರುವ ಸ್ವಿಡ್ಜರ್ಲ್ಯಾಂಡ್ನ ಎಲಿಜಬೆತ್ ಅವರನ್ನು ಸುಶೀಲಾ ಸುರೇಶ್ ಹಾಗೂ ಸುರೇಶ್ಚಂಗಪ್ಪ ದಂಪತಿಗಳು ಇಂದಿಗೂ ನೆನೆಯುತ್ತಾರೆ. ಇವತ್ತು ಹನಿವ್ಯಾಲಿ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದೆ. ಅದು ಇನ್ನಷ್ಟು ಅಭಿವೃದ್ದಿಯತ್ತ ಸಾಗಲು ಅಪ್ಪ ಅಮ್ಮನೊಂದಿಗೆ ಮಗನೂ ಕಾರ್ಯನಿರ್ವಹಿಸುತ್ತಿರುವುದೇ ಕಾರಣವಾಗಿದೆ. ಮಾಹಿತಿಗೆ 08272-238339,9060626970 ಸಂಪರ್ಕಿಸಬಹುದು.

ವೆಬ್ದುನಿಯಾವನ್ನು ಓದಿ